ಬೀದರ್ | ಸಚಿವ ಈಶ್ವರ್ ಖಂಡ್ರೆ ವಿರುದ್ಧ ಸಿಎಂಗೆ ದೂರು ನೀಡಿದ ಜಿಲ್ಲಾ ಕಾಂಗ್ರೆಸ್ ನಾಯಕರು

ಬೀದರ್ : ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಕಾಂಗ್ರೆಸ್ ನಾಯಕರು ದೂರು ನೀಡಿದ್ದಾರೆ.
ಕಾಂಗ್ರೆಸ್ ನಾಯಕರು ನೀಡಿರುವ ದೂರಿನಲ್ಲಿ ಸಚಿವ ಈಶ್ವರ್ ಖಂಡ್ರೆ ಅವರು ಮತ್ತು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ್ ಜಾಬಶೆಟ್ಟಿ ಅವರು ಜಿಲ್ಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳು ನಡೆಸುತ್ತಿದ್ದಾರೆ. ಈಶ್ವರ್ ಖಂಡ್ರೆ ಅವರು 2021 ರಿಂದ 2023ರವರೆಗೆ ಕೆಪಿಸಿಸಿಯ ಕಾರ್ಯಾಧ್ಯಕ್ಷರಾಗಿದ್ದರು. ಆ ಸಮಯದಲ್ಲಿ ಜಿಲ್ಲೆಯ 6 ವಿಧಾನಸಭೆ ಕ್ಷೇತ್ರಗಳಲ್ಲಿ 4 ಕ್ಷೇತ್ರ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು. ಆದರೆ 2023 ರ ಚುನಾವಣೆಯಲ್ಲಿ ಕೇವಲ 2 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಗೆದ್ದಿದೆ. ಈಶ್ವರ್ ಖಂಡ್ರೆ ಅವರು 5 ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡಿಲ್ಲ ಎಂದು ದೂರಲಾಗಿದೆ.
ಸಚಿವ ಈಶ್ವರ್ ಖಂಡ್ರೆ ಅವರ ಬೆಂಬಲದಿಂದ ಬಿಜೆಪಿ ಶಾಸಕರು ಕಾಂಗ್ರೆಸ್ ನಾಯಕರ ಮೇಲೆ ಒತ್ತಡ ಹಾಕಿ ಮಾನಸಿಕವಾಗಿ ಕುಗ್ಗಿಸುತ್ತಿದ್ದಾರೆ. ಇದೆ ಪರಿಸ್ಥಿತಿ ಮುಂದುವರೆದರೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ನಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ. ಈಶ್ವರ್ ಖಂಡ್ರೆ ಅವರು ತಮ್ಮ ಸ್ವಾರ್ಥಕ್ಕಾಗಿ ಪಕ್ಷವನ್ನೇ ಬಲಿ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಚಿವ ಈಶ್ವರ್ ಖಂಡ್ರೆ ಅವರು ಜಿಲ್ಲಾ ಕಾಂಗ್ರೆಸ್ ಸಮಿತಿಯನ್ನು ಬಲಪಡಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಜಿಲ್ಲಾಧ್ಯಕ್ಷ, ಉಸ್ತುವಾರಿ ಸಚಿವ ಹಾಗೂ ನಮ್ಮ ನಡುವೆ ಯಾವುದೇ ರೀತಿಯ ಸಮನ್ವಯತೆ ಇಲ್ಲ. ಜಿಲ್ಲೆಯ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಳೆದ ಆರು ತಿಂಗಳಲ್ಲಿ ಜಿಲ್ಲೆಯಲ್ಲಿ 10 ರಿಂದ 11 ಜಾತಿ ನಿಂದನೆ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಸಚಿವರ ಕ್ಷೇತ್ರದಲ್ಲಿಯೇ 10 ಪ್ರಕರಣಗಳು ದಾಖಲಾಗಿವೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಶಾಸಕರು, ನಾಯಕರು ಹೇಳಿದ ಕೆಲಸ ಮಾಡಬೇಕು ಎಂದು ಎಲ್ಲ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ಎಸ್ ಸಿ ಎಸ್ ಪಿ, ಟಿ ಎಸ್ ಪಿ ಯ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ಕಾಮಗಾರಿ ಮಾಡುತ್ತಿದ್ದಾರೆ. ದಲಿತರ ಸುಮಾರು 50 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಭೂಮಿಯನ್ನು ಅರಣ್ಯ ವಶಪಡಿಸಿಕೊಂಡು ಜಿಲ್ಲೆಯ ದಲಿತರನ್ನು ಬೀದಿಗೆ ತಳ್ಳಲಾಗುತ್ತಿದೆ ಎಂದು ದೂರಿದ್ದಾರೆ.
ಜಿಲ್ಲೆಯಲ್ಲಿ ಪಕ್ಷ ಸಧೃಡವಾಗಿರಬೇಕಾದರೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಮತ್ತು ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ್ ಜಾಬಶೆಟ್ಟಿ ಅವರನ್ನು ಬದಲಾವಣೆ ಮಾಡಬೇಕು. ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದವರನ್ನು ಮರು ಪರಿಶೀಲಿಸಿ ಪಕ್ಷದ ನಿಷ್ಠಾವಂತರನ್ನು ನೇಮಕ ಮಾಡಬೇಕು. ಹಾಗೆಯೇ ಪಕ್ಷದ ಎಲ್ಲ ಮುಖಂಡರನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವ ರಾಜಶೇಖರ್ ಪಾಟೀಲ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಅರವಿಂದಕುಮಾರ್ ಅರಳಿ, ಕೆ.ಪುಂಡಲೀಕರಾವ್, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ್ ಪಾಟೀಲ್, ಭೀಮರಾವ್ ಪಾಟೀಲ್, ಕೆಪಿಸಿಸಿ ಸಹಕಾರ ವಿಭಾಗದ ಅಧ್ಯಕ್ಷ ಧನರಾಜ್ ತಾಳಂಪಳ್ಳಿ, ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಮೂಲಗೆ, ವಿದ್ಯಾಸಾಗರ್ ಶಿಂದೆ, ಪಂಡಿತರಾವ್ ಚಿದ್ರಿ, ಶಂಕರ್ ರೆಡ್ಡಿ ಚಿಟ್ಟಾ, ನಾಸಿರ್ ಖಾನ್, ಗುಂಡು ರೆಡ್ಡಿ, ಅಜ್ಮತ್ ಪಟೇಲ್, ಅಬ್ದುಲ್ ಮನ್ನಾನ್ ಶೇಠ್, ಪ್ರದೀಪ್ ವಿ.ಕುಶನೂರ್, ಶೇಕ್ ಹಾಜಿ ಮನಿಯಾರ್, ಲಕ್ಶ್ಮಣ ಬುಳ್ಳಾ ಹಾಗೂ ರಘುನಾಥ್ ಜಾಧವ್ ಸೇರಿದಂತೆ ಪಕ್ಷದ ಇತರ ಪ್ರಮುಖರು ಉಪಸ್ಥಿತರಿದ್ದರು.







