ಬೀದರ್ | ನ.30 ರಂದು ಜಿಲ್ಲಾ ಮಟ್ಟದ ಸ್ವಾಭಿಮಾನಿ ಮರಾಠ ಸಮಾವೇಶ : ಪದ್ಮಾಕರ್ ಪಾಟೀಲ್

ಬೀದರ್ : ನ.30 ರಂದು ಬೆಳಿಗ್ಗೆ 11:30 ಗಂಟೆಗೆ ನಗರದ ಗಣೇಶ್ ಮೈದಾನದಲ್ಲಿ ಜಿಲ್ಲಾ ಮಟ್ಟದ ಸ್ವಾಭಿಮಾನಿ ಮರಾಠ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಉದ್ಘಾಟಕರಾಗಿ ಆಗಮಿಸುತ್ತಿದ್ದಾರೆ ಎಂದು ಪದ್ಮಾಕರ್ ಪಾಟೀಲ್ ಅವರು ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಯಾವುದೇ ರೀತಿಯ ರಾಜಕೀಯ ಉದ್ದೇಶವಿಲ್ಲ. ಎಲ್ಲ ರಾಜಕೀಯ ಪಕ್ಷದಲ್ಲಿನ ನಮ್ಮ ಸಮುದಾಯದ ಮುಖಂಡರು ಸೇರಿಸಿಕೊಂಡು ಈ ಸಮಾವೇಶ ನಡೆಸಲಾಗುತ್ತಿದೆ ಎಂದರು.
ನಮ್ಮ ಸಮುದಾಯವು ವಿಶ್ವಾಸ ತೆಗೆದುಕೊಳ್ಳುವ ಮೂಲಕ ಸಮಾಜದಲ್ಲಿನ ಶೈಕ್ಷಣಿಕ, ಆರ್ಥಿಕ, ಮಹಿಳಾ ಸಬಲೀಕರಣ, ಸಾಮಾಜಿಕ, ರಾಜಕೀಯ ಅವ್ಯವಸ್ಥೆಯನ್ನು ಸರಿಪಡಿಸುವುದೇ ಈ ಸಮಾವೇಶದ ಉದ್ದೇಶವಾಗಿದೆ ಎಂದು ಹೇಳಿದರು.
ನ.30ರಂದು ಗಣೇಶ್ ಮೈದಾನದಲ್ಲಿ ನಡೆಯುವ ಈ ಸಮಾವೇಶ ಕಾರ್ಯಕ್ರಮದಲ್ಲಿ ಸುಮಾರು 5 ಸಾವಿರಕ್ಕಿಂತ ಹೆಚ್ಚಿನ ಜನರು ಭಾಗಿಯಾಗುವ ನಿರೀಕ್ಷೆ ಇದೆ. ಜಿಲ್ಲೆಯ ಮರಾಠ ಸಮುದಾಯದ ಎಲ್ಲ ಜನರು ಇದರಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾತ್ಯಾರಾವ್ ಪಾಟೀಲ್, ದಿಗಂಬರ್ ಮಾನಕರಿ, ಬಾಬುರಾವ್ ಬಿರಾದಾರ್, ಪ್ರಕಾಶ್ ಪಾಟೀಲ್, ಕಿಶನರಾವ್ ಪಾಟೀಲ್, ಅಂಗದ ಜಗತಾಪ್, ಜನಾರ್ದನ ಬಿರಾದಾರ್, ವೆಂಕಟೇಶ್, ಅನಿಲ್ ಕಾಳೆ, ಅಮರ್, ಪಾಂಡುರಂಗ್ ಕನಸೆ ಹಾಗೂ ನಾರಾಯಣ ಸೇರಿದಂತೆ ಇತರರು ಉಪಸ್ಥಿತರಿದ್ದರು.







