ಬೀದರ್ | ಓದುವಿಕೆಯಲ್ಲಿ ಜಾತಿ–ಧರ್ಮದ ಆಧಾರದ ವಿಭಜನೆ ಕಳವಳಕಾರಿ: ಬರಗೂರು ರಾಮಚಂದ್ರಪ್ಪ

ಬೀದರ್ : ಜಾತಿ ಹಾಗೂ ಧರ್ಮದ ಕಾರಣದಿಂದ ಓದುವಿಕೆಯಲ್ಲೂ ವಿಭಜನೆ ಉಂಟಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಕಳವಳ ವ್ಯಕ್ತಪಡಿಸಿದರು.
ನಗರದ ಸಾಯಿ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ವೀರಲೋಕ ಪುಸ್ತಕ ಸಂತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೊಡ್ಡ ಕ್ರಾಂತಿಕಾರಿಗಳು ತಮ್ಮ ವಿರೋಧಿಗಳ ಪುಸ್ತಕಗಳನ್ನೂ ಓದಬೇಕು ಎಂದು ಹೇಳಿದ್ದರೆ, ಇತ್ತೀಚಿನ ದಿನಗಳಲ್ಲಿ ಓದುವಿಕೆಯಲ್ಲಿಯೇ ಭೇದಭಾವ ಉಂಟಾಗುತ್ತಿರುವುದು ವಿಷಾದಕರ ಸಂಗತಿ ಎಂದರು.
ಜಗತ್ತನ್ನು ಬೆಳಗಲು ಸೂರ್ಯ ಬೇಕಾದಂತೆ, ಬದುಕನ್ನು ಬೆಳಗಲು ಪುಸ್ತಕ ಬೇಕು. ಜನರ ಬಳಿಗೆ ಪುಸ್ತಕ ತಲುಪಿಸುವ ಕಾರ್ಯವೇ ಪುಸ್ತಕ ಸಂತೆಯ ಉದ್ದೇಶವಾಗಿದೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರ ಅತ್ಯಂತ ಮಹತ್ವದ ಸೇವಾ ಕ್ಷೇತ್ರವಾಗಿದ್ದು, ಮಾತಿಗೆ ಇರುವ ಶಕ್ತಿಯಷ್ಟೇ ಮೌನಕ್ಕೂ ಶಕ್ತಿ ಇದೆ. ಸಮಾಜ, ಸರ್ಕಾರ ಮತ್ತು ಜನರು ಪುಸ್ತಕದ “ಕಿವಿಯಾಗಬೇಕು”. ಮಕ್ಕಳು ಓದು ಮತ್ತು ಬರವಣಿಗೆಯನ್ನು ಅಭ್ಯಾಸ ಮಾಡಬೇಕು ಎಂದು ಕರೆ ನೀಡಿದರು.
ಪ್ರೊಫೆಸರ್ ಒಂದು ಸ್ಥಾನವಾದರೆ, ಮೇಸ್ಟ್ರು ಒಂದು ಮಾನ. ಜಾತ್ಯತೀತವಾಗಿ ಯೋಚಿಸುವ, ಜಾತಿ–ಧರ್ಮವನ್ನು ಸಾರ್ವಜನಿಕ ಬದುಕಿನಲ್ಲಿ ದ್ವೇಷ ಹುಟ್ಟುಹಾಕಲು ಬಳಸದ ನಿಜವಾದ ಶಿಕ್ಷಕರ ಅಗತ್ಯತೆ ಇಂದು ಹೆಚ್ಚಾಗಿದೆ ಎಂದು ತಿಳಿಸಿದರು.
ಆರೋಗ್ಯ ಮತ್ತು ಶಿಕ್ಷಣ ಮೂಲತಃ ಸೇವಾ ಕ್ಷೇತ್ರಗಳಾಗಿದ್ದರೂ, ಇವು ಇಂದು ಉದ್ಯಮಗಳಾಗಿ ಬದಲಾಗುತ್ತಿವೆ. ಗ್ಯಾಟ್ ಒಪ್ಪಂದದಲ್ಲಿ ಶಿಕ್ಷಣವನ್ನು ‘ಎಜುಕೇಷನ್ ಇಂಡಸ್ಟ್ರಿ’ ಎಂದು ಪರಿಗಣಿಸಲಾಗಿದೆ. ಇದರಿಂದ ಶಿಕ್ಷಣವೇ ಕಾರ್ಖಾನೆಯಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ವರ್ಷಕ್ಕೆ 7 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗುತ್ತಿವೆ. ಆದರೆ ಸಮೀಕ್ಷೆಯೊಂದರ ಪ್ರಕಾರ ಶೇ.60 ಜನ ಉದ್ಯಮ ಕ್ಷೇತ್ರದ ಶಿಕ್ಷಣ ಆಯ್ಕೆ ಮಾಡುತ್ತಿದ್ದು, ಮಾನವಿಕ ವಿಜ್ಞಾನಗಳನ್ನು ಆಯ್ಕೆ ಮಾಡುತ್ತಿರುವವರು ಕೇವಲ ಶೇ.5 ಮಾತ್ರ. ಇದರಿಂದ ಮುಂದಿನ ದಿನಗಳಲ್ಲಿ ಪುಸ್ತಕ ಓದುವವರೇ ಸಿಗದ ಪರಿಸ್ಥಿತಿ ನಿರ್ಮಾಣವಾಗುವ ಭೀತಿ ಇದೆ ಎಂದರು.
ಮಾಧ್ಯಮ, ಚಲನಚಿತ್ರ, ಪುಸ್ತಕ ಎಲ್ಲವೂ ಉದ್ಯಮಗಳಾಗುತ್ತಿವೆ. ಉದ್ಯಮಕ್ಕೆ ಸಂಪಾದನೆ ಮುಖ್ಯವಾದರೆ, ಮಾಧ್ಯಮಕ್ಕೆ ಸಂವೇದನೆ ಮುಖ್ಯ. ಇವೆರಡರ ಮಧ್ಯೆ ಸಮತೋಲನ ಅಗತ್ಯ. ಡಿಜಿಟಲೀಕರಣದಿಂದ ಪುಸ್ತಕ ನಾಶವಾಗುವುದಿಲ್ಲ. ಪುಸ್ತಕ ಸಾಯುವುದಿಲ್ಲ, ಆದರೆ ಓದುವ ಅಭಿರುಚಿ ಕುಗ್ಗುತ್ತಿದೆ. ಡಿಜಿಟಲ್ ಇಂಡಿಯಾದ ಜೊತೆಗೆ ಸಮಾನತೆ ಇಂಡಿಯಾ ಅಗತ್ಯವಿದೆ ಎಂದು ಹೇಳಿದರು.
ದೇಶದಲ್ಲಿ ದಿನಕ್ಕೆ ಸರಾಸರಿ 86 ಮಹಿಳೆಯರ ಮೇಲೆ ಅತ್ಯಾಚಾರ, ವಾರಕ್ಕೆ 13 ದಲಿತರ ಹತ್ಯೆ ನಡೆಯುತ್ತಿದೆ. ಶೇ.51.2 ಜನ ಕೂಲಿ ಕಾರ್ಮಿಕರಾಗಿದ್ದಾರೆ. ಇಂತಹ ಸಮಾಜವನ್ನು ಮಾನವೀಯ ಸಮಾಜ ಎಂದು ಕರೆಯಬಹುದೇ ಎಂದು ಪ್ರಶ್ನಿಸಿ, ಸಮಾಜ ಇದಕ್ಕೆ ಸ್ಪಂದಿಸಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಪುಸ್ತಕಗಳು ಜ್ಞಾನವನ್ನು ಹೆಚ್ಚಿಸುತ್ತವೆ. ಸಾಮಾಜಿಕ ಬದಲಾವಣೆಗೆ ಸಾಹಿತ್ಯವೇ ಮೂಲ. ಅಂಬೇಡ್ಕರ್ ಅವರು ಸಂವಿಧಾನ ರಚನೆಗೆ ಕೈಹಾಕಲು ಅವರ ಜ್ಞಾನವೇ ಕಾರಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ಬಸವಲಿಂಗ ಪಟ್ಟದೇವರು, ಹುಲಸೂರು ಮಠದ ಶಿವಾನಂದ ಮಹಾಸ್ವಾಮಿ, ಸಚಿವ ರಹೀಂ ಖಾನ್, ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ನಟ ನೆನಪಿರಲಿ ಪ್ರೇಮ್, ನಟಿ ಸುಲಕ್ಷಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.







