ಬೀದರ್ : ವರದಕ್ಷಿಣೆ ಕಿರುಕುಳ ಆರೋಪ; ಪ್ರಕರಣ ದಾಖಲು

ಬೀದರ್ : ವರದಕ್ಷಿಣೆ ನೀಡುವಂತೆ ಗಂಡನ ಮನೆಯವರು ಕಿರಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.
ನಗರದ ಶಹಗಂಜ್ ಬಡಾವಣೆಯ ನಿವಾಸಿ ಪೂಜಾ ದೂರು ನೀಡಿದ ಮಹಿಳೆ. ದೂರಿನಲ್ಲಿ ತನ್ನ ಗಂಡ ಆಕಾಶ್ ಮತ್ತು ನನ್ನ ನಡುವೆ 2022 ಆಗಸ್ಟ್ ನಲ್ಲಿ ನಿಶ್ಚಿತಾರ್ಥವಾಗಿ ಡಿಸೆಂಬರ್ ನಲ್ಲಿ ಮದುವೆಯಾಗಿತ್ತು. ಮದುವೆ ಸಮಯದಲ್ಲಿ 2 ತೊಲೆ ಚಿನ್ನ ಮತ್ತು 5 ಲಕ್ಷ ರೂ. ನಗದನ್ನು ವರದಕ್ಷಿಣೆ ನೀಡಬೇಕು ಎಂಬ ಗಂಡನ ಮನೆಯವರ ಒತ್ತಾಯದ ಬೇಡಿಕೆಗೆ ಒಪ್ಪಿ, ನಮ್ಮ ತಂದೆ ಅದನ್ನು ನೀಡಿದ್ದರು. ಇದೀಗ ಮತ್ತೆ 2 ಲಕ್ಷ ರೂ. ಮತ್ತು 2 ತೊಲೆ ಚಿನ್ನ ವರದಕ್ಷಿಣೆ ರೂಪದಲ್ಲಿ ನೀಡಬೇಕು ಎಂದು ಕಿರಕುಳ ನೀಡುತ್ತಿದ್ದಾರೆ. ಇದನ್ನು ನನ್ನ ಕುಟುಂಬಸ್ಥರಿಗೆ ತಿಳಿಸಿದಾಗ ನನ್ನ ತಂದೆ ಮತ್ತು ಸಹೋದರ ಬಂದು ನನ್ನನ್ನು ಆಳಂದದ ತವರು ಮನೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಜೂನ್ 2025 ರಲ್ಲಿ ನನ್ನ ಮೊದಲನೇ ಮಗನ ಹುಟ್ಟುಹಬ್ಬ ತವರು ಮನೆಯಲ್ಲಿಯೇ ಆಚರಿಸಿದ್ದು, ಹುಟ್ಟುಹಬ್ಬಕ್ಕೆ ನನ್ನ ಗಂಡ ಮತ್ತು ಅವರ ಮನೆಯವರು ಬಂದಿದ್ದರು. ಆವಾಗ ನಾನು ಅವರ ಜೊತೆಗೆ ಗಂಡನ ಮನೆಗೆ ಹೋಗಿದ್ದೇನೆ. ಜುಲೈ ತಿಂಗಳಲ್ಲಿ ಮತ್ತೆ ನನಗೆ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಕಾಟ ನೀಡಿದಾಗ, ನನ್ನ ತಂದೆ ಮತ್ತು ಸಹೋದರನನ್ನು ಕರೆಸಿದ್ದೇನೆ. ಆದರೆ ನನ್ನ ತಂದೆ ಮತ್ತು ಸಹೋದರನ ಮುಂದೆಯೇ ನನ್ನ ಗಂಡ, ಅತ್ತೆ, ಮಾವ, ಮೈದುನ ಮತ್ತು ನಾದಿನಿಯರು ಸೇರಿ ನನಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಹೊಡೆದಿದ್ದಾರೆ. ವರದಕ್ಷಿಣೆ ತೆಗೆದುಕೊಂಡು ಬರದೇ ಇದ್ದರೆ ಜೀವ ತೆಗೆಯುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಪೂಜಾ ಆರೋಪಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.







