Bidar | ಫೋರ್ಬ್ಸ್ ಇಂಡಿಯಾದ ‘ಲೀಡರ್ ಆಫ್ ಟುಮಾರೋ’ ಗೌರವಕ್ಕೆ ಡಾ.ಅಬ್ದುಲ್ ಖದೀರ್ ಆಯ್ಕೆ

ಬೀದರ್: ನಗರದ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹ ಅಧ್ಯಕ್ಷ ಹಾಗೂ ಶಿಕ್ಷಣ ತಜ್ಞ ಡಾ. ಅಬ್ದುಲ್ ಖದೀರ್ ಅವರನ್ನು ಫೋರ್ಬ್ಸ್ ಇಂಡಿಯಾ ನಿಯತಕಾಲಿಕೆಯು ‘ಲೀಡರ್ ಆಫ್ ಟುಮಾರೋ’ ಎಂದು ಗುರುತಿಸಿದೆ.
ವಿಶಿಷ್ಟ ಸಾಧನೆ ಮೂಲಕ ಗಮನಾರ್ಹ ಸಾಧನೆ ಮಾಡಿದ 10 ಭಾರತೀಯರನ್ನು ಫೋರ್ಬ್ಸ್ ಇಂಡಿಯಾ ‘ನಾಳೆಯ ನಾಯಕರು’ ಎಂದು ಆಯ್ಕೆ ಮಾಡಿದ್ದು, ಅದರಲ್ಲಿ ಡಾ. ಖದೀರ್ ಸ್ಥಾನ ಪಡೆದಿರುವುದು ವಿಶೇಷವಾಗಿದೆ.
ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ತರಲು ಶಾಹೀನ್ ಸಂಸ್ಥೆ ಜಾರಿಗೊಳಿಸಿದ ‘ಶೈಕ್ಷಣಿಕ ತೀವ್ರ ನಿಗಾ ಘಟಕ’ (AICU) ಮಾದರಿಯನ್ನು ಫೋರ್ಬ್ಸ್ ವಿಶೇಷವಾಗಿ ಪ್ರಶಂಸಿಸಿದೆ.
ಬೀದರ್‌ನಲ್ಲಿ ವಿದ್ಯಾರ್ಥಿಗಳು ಖಾಸಗಿ ಟ್ಯೂಷನ್‌ಗಳ ಮೇಲೆ ಅವಲಂಬಿತರಾಗಿದ್ದ ಹಿನ್ನೆಲೆ, ಶಾಲಾ ಅವಧಿಯಲ್ಲೇ ವೈಯಕ್ತಿಕ ಗಮನ ನೀಡುವ ಕಾರ್ಯಕ್ರಮವನ್ನು ಶಾಹೀನ್ ಸಂಸ್ಥೆ ಆರಂಭಿಸಿತು. ಇದರಿಂದ ಟ್ಯೂಷನ್ ಅವಲಂಬನೆ ಕಡಿಮೆಯಾಗಿದ್ದು, ಬಳಿಕ ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಿಕ್ಷಣಕ್ಕೆ ತರುವ ಯೋಜನೆಯಾಗಿ AICU ರೂಪುಗೊಂಡಿತು.
ಇದಲ್ಲದೆ, ಡಾ. ಅಬ್ದುಲ್ ಖದೀರ್ ಅವರು ವಿದೇಶಗಳಲ್ಲಿ ಎಂಬಿಬಿಎಸ್ ಕಾಲೇಜುಗಳ ಸ್ಥಾಪನೆಯ ಮೂಲಕ ವೈದ್ಯಕೀಯ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಜಾಗತಿಕ ಅವಕಾಶಗಳನ್ನು ಒದಗಿಸುತ್ತಿದ್ದಾರೆ.
1989ರಲ್ಲಿ ಸ್ಥಾಪಿತವಾದ ಶಾಹೀನ್ ಶಿಕ್ಷಣ ಸಂಸ್ಥೆಯಡಿಯಲ್ಲಿ ದೇಶದಾದ್ಯಂತ 116ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, 45 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.






