ಬೀದರ್ | ಸಕಲ ಸರಕಾರಿ ಗೌರವಗಳೊಂದಿಗೆ ಡಾ.ಭೀಮಣ್ಣ ಖಂಡ್ರೆ ಅಂತ್ಯಕ್ರಿಯೆ

ಬೀದರ್: ಕಲ್ಯಾಣ ಕರ್ನಾಟಕದ ಧೀಮಂತ ನಾಯಕ, ಶತಾಯುಷಿ ಹಾಗೂ ಹಿರಿಯ ಮುತ್ಸದ್ದಿ ರಾಜಕಾರಣಿ ಡಾ.ಭೀಮಣ್ಣ ಖಂಡ್ರೆ (102) ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಭಾಲ್ಕಿಯ ಶಾಂತಿ ಧಾಮದಲ್ಲಿ ಶನಿವಾರ ನೆರವೇರಿಸಲಾಯಿತು.
ಲಿಂಗಾಯತ ಧರ್ಮದ ವಿಧಿವಿಧಾನಗಳಂತೆ ಚಿಕಲಚಂದಾ ರಸ್ತೆಯಲ್ಲಿರುವ ಅವರ ಪತ್ನಿ ಲಕ್ಷ್ಮಿಬಾಯಿ ಅವರ ಸಮಾಧಿ ಸ್ಥಳದ ಸನಿಹದಲ್ಲೇ ಅಂತ್ಯ ಸಂಸ್ಕಾರ ನಡೆಸಲಾಯಿತು.
ಶನಿವಾರ ಬೆಳಿಗ್ಗೆಯಿಂದಲೇ ಭಾಲ್ಕಿಯ ಅವರ ಸ್ವಗೃಹದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಜಿಲ್ಲೆ ಹಾಗೂ ನೆರೆಯ ರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ತಮ್ಮ ಪ್ರೀತಿಯ ನಾಯಕನ ಕೊನೆಯ ದರ್ಶನ ಪಡೆದರು. ಸಂಜೆ 4 ಗಂಟೆಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಅಂತಿಮ ಯಾತ್ರೆ ಆರಂಭಿಸಲಾಯಿತು.
ಡಾ. ಭೀಮಣ್ಣ ಖಂಡ್ರೆ ಅವರ ಮೃತದೇಹವನ್ನು ನಗರದ ಪ್ರಮುಖ ರಸ್ತೆಗಳು, ಬಸವೇಶ್ವರ ವೃತ್ತ, ಗಾಂಧಿ ವೃತ್ತ ಹಾಗೂ ಅಂಬೇಡ್ಕರ್ ವೃತ್ತದ ಮೂಲಕ ಶಾಂತಿ ಧಾಮದವರೆಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಈ ವೇಳೆ ಅಭಿಮಾನಿಗಳು ನೆಚ್ಚಿನ ನಾಯಕನ ಪರವಾಗಿ ಜೈ ಘೋಷಗಳನ್ನು ಕೂಗಿದರು. ಶಾಂತಿ ಧಾಮಕ್ಕೆ ಪಾರ್ಥಿವ ಶರೀರ ತಲುಪುತ್ತಿದ್ದಂತೆಯೇ ಪೊಲೀಸರು ಕುಶಾಲತೋಪು ಹಾರಿಸಿ ಗೌರವ ಸಲ್ಲಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಬಿ.ವೈ. ವಿಜಯೇಂದ್ರ, ಸಚಿವರಾದ ರಹೀಮ್ ಖಾನ್, ಶರಣಬಸಪ್ಪ ದರ್ಶನಾಪುರ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ನೂರಾರು ಮಠಾಧೀಶರು ಹಾಗೂ ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ನಾಡಿನ ಹಿರಿಯ ನಾಯಕರು, ಹೈದರಾಬಾದ್ ಕರ್ನಾಟಕ ವಿಮೋಚನೆ ಹೋರಾಟಗಾರ ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನದ ಸುದ್ದಿ ತಿಳಿದು ದುಃಖವಾಯಿತು. ಅಗಲಿದ ಹಿರಿಯ ಜೀವಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ
-ಆರ್.ಅಶೋಕ್, ಪ್ರತಿಪಕ್ಷ ನಾಯಕ
ರಾಜಕಾರಣಿ ಭೀಮಣ್ಣ ಖಂಡ್ರೆ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ. ರಾಜಕಾರಣಿಗಳು ಸರಳವಾಗಿರಬೇಕು. ಸರಳತೆಯೇ ರಾಜಕಾರಣಿಗಳ ಕೈ ಹಿಡಿಯುತ್ತೆ ಎಂದು ಅವರು ಹೇಳಿದ್ದರು. ಅವರಿಂದ ನಾನು ಸರಳತೆ ಕಲಿತಿದ್ದೇನೆ. ಭೀಮಣ್ಣ ಖಂಡ್ರೆ ಅವರ ದಾರಿಯಲ್ಲೇ ನಾವೆಲ್ಲ ನಡೆಯುತ್ತಿದ್ದೇವೆ.
-ಪ್ರಿಯಾಂಕ್ ಖರ್ಗೆ, ಸಚಿವ
ಹಿರಿಯ ನಾಯಕ ಭೀಮಣ್ಣ ಖಂಡ್ರೆ ಸಮಾಜಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ನಮ್ಮ ತಂದೆ ಹಾಗು ಭೀಮಣ್ಣ ಖಂಡ್ರೆ ಬಹಳ ಆತ್ಮೀಯ ಸ್ನೇಹಿತರು. ಹಿರಿಯ ಜೀವಿಯನ್ನ ಕಳೆದುಕೊಂಡು ನಾವೆಲ್ಲ ಬಡವಾಗಿದ್ದೇವೆ.
-ಎಂ.ಬಿ.ಪಾಟೀಲ್, ಸಚಿವ
ಲೋಕನಾಯಕ ಭೀಮಣ್ಣ ಖಂಡ್ರೆ ನಿಧನದಿಂದ ರಾಜ್ಯ ಒಬ್ಬ ಸಮಾಜಮುಖಿ ಮಾರ್ಗದರ್ಶಕ ನೇತಾರರನ್ನು ಕಳೆದುಕೊಂಡಿದೆ. ರಾಜಕೀಯ ರಂಗದ ಒಂದು ಸುದೀರ್ಘ ಕೊಂಡಿ ಕಳಚಿದಂತಾಗಿದೆ. ಉತ್ತರ ಕರ್ನಾಟಕದ ಶೈಕ್ಷಣಿಕ ಮತ್ತು ಸಹಕಾರ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ್ದರು.
-ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ







