Bidar | ವಚನ ಸಾಹಿತ್ಯವನ್ನು ಸಂಗ್ರಹಿಸಿ ಬೆಳಕಿಗೆ ತಂದ ಮಹನೀಯರು ಡಾ.ಫ.ಗು.ಹಳಕಟ್ಟಿ: ಡಾ.ಸುರೇಖಾ ಬಿರಾದಾರ್

ಬೀದರ್: 12ನೇ ಶತಮಾನದಲ್ಲಿ ಬಸವಾದಿ ಶರಣರು ನಡೆಸಿದ ವೈಜ್ಞಾನಿಕ ಹಾಗೂ ವೈಚಾರಿಕ ಕ್ರಾಂತಿಯು ಸಕಲ ಜೀವಿಗಳ ಕಲ್ಯಾಣವನ್ನು ಬಯಸುವುದಾಗಿತ್ತು. ಶರಣರ ವಚನಗಳನ್ನು ಸಂಗ್ರಹಿಸಿ, ಸಂಶೋಧಿಸಿ ಸಮಾಜದ ಮುಂದೆ ತಂದ ಮಹತ್ವದ ಕಾರ್ಯವನ್ನು ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರು ಮಾಡಿದ್ದಾರೆ ಎಂದು ಬೀದರ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ. ಸುರೇಖಾ ಬಿರಾದಾರ್ ಹೇಳಿದರು.
ನಗರದ ಹೌಸಿಂಗ್ ಬೋರ್ಡ್ ಕಾಲೋನಿಯ ಸುವರ್ಣಾ ಚಿಮಕೋಡೆಯವರ ನಿವಾಸದಲ್ಲಿ ಶುಕ್ರವಾರ ಸಂಜೆ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಹಾಗೂ ಶರಣ ಹಡಪದ ಅಪ್ಪಣ್ಣ ಮತ್ತು ಶರಣೆ ಲಿಂಗಮ್ಮ ಅವರ ಕುರಿತು ಆಯೋಜಿಸಿದ್ದ ಮಾಸಿಕ ಚಿಂತನಗೋಷ್ಠಿಯಲ್ಲಿ ಅವರು ಮಾತನಾಡಿದರು.
ಶರಣರು ರಚಿಸಿದ ಸುಮಾರು 10 ಸಾವಿರ ವಚನಗಳು ತಾಡೋಲೆಗಳಲ್ಲಿ ಬರೆದು ಮನೆಗಳಲ್ಲಿ ಪೂಜೆಗೆ ಮಾತ್ರ ಸೀಮಿತವಾಗಿದ್ದವು. ಅವುಗಳನ್ನು ಮನೆ-ಮಠಗಳಿಂದ ಸಂಗ್ರಹಿಸಿ, ಸಂಶೋಧನೆ ನಡೆಸಿ, ಪ್ರಕಟಿಸುವ ಮೂಲಕ ಜನಸಾಮಾನ್ಯರಿಗೆ ತಲುಪಿಸಿದ ಶ್ರೇಯಸ್ಸು ಡಾ. ಫ.ಗು. ಹಳಕಟ್ಟಿಯವರಿಗೆ ಸಲ್ಲುತ್ತದೆ ಎಂದು ಹೇಳಿದರು.
ವಕೀಲ ವೃತ್ತಿಯನ್ನು ತ್ಯಜಿಸಿ ನಿಸ್ವಾರ್ಥ ಸೇವೆಯ ಮೂಲಕ ವಚನ ಸಂರಕ್ಷಣೆಗೆ ಜೀವನವನ್ನೇ ಮುಡಿಪಾಗಿಟ್ಟ ಹಳಕಟ್ಟಿಯವರು, ಕ್ರೈಸ್ತ ಮಿಷನರಿಗಳು ವಚನಗಳನ್ನು ಮುದ್ರಿಸಲು ನಿರಾಕರಿಸಿದಾಗ ಸ್ವತಃ ಮುದ್ರಣಾಲಯ ಸ್ಥಾಪಿಸಿ ಬಡತನದಲ್ಲಿಯೇ ವಚನಗಳನ್ನು ಪ್ರಕಟಿಸಿದರು. ಹಳೆಯ ಸೈಕಲ್‌ನಲ್ಲಿ ಮನೆ ಮನೆಗೆ ತೆರಳಿ ವಚನಗಳನ್ನು ಸಂಗ್ರಹಿಸಿದ ಅವರ ಸೇವೆಯನ್ನು ಗುರುತಿಸಿ ಅಂದಿನ ಸರ್ಕಾರ ‘ರಾವಬಹದ್ದೂರ್’ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು ಎಂದು ತಿಳಿಸಿದರು.
ಡಾ. ಫ.ಗು. ಹಳಕಟ್ಟಿಯವರನ್ನು ಕರ್ನಾಟಕದ ಮ್ಯಾಕ್ಸ್‌ಮುಲ್ಲರ್ ಎಂದು ಕರೆಯಲಾಗುತ್ತದೆ. ಕನ್ನಡ ಭಾಷೆ ಮತ್ತು ವಚನ ಸಾಹಿತ್ಯದ ಸಂರಕ್ಷಣೆಗಾಗಿ ಅವರು ಸಲ್ಲಿಸಿದ ಸೇವೆ ಅನನ್ಯವಾಗಿದೆ ಎಂದು ಹೇಳಿದರು.
ಬಿವಿಬಿ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕಿ ಡಾ. ಶಿವಲೀಲಾ ಮಠಪತಿ ಮಾತನಾಡಿ, ಶರಣ ಹಡಪದ ಅಪ್ಪಣ್ಣ ಅವರು ಬಸವಣ್ಣನವರ ಆಪ್ತ ಕಾರ್ಯದರ್ಶಿ, ಸಲಹೆಗಾರ ಹಾಗೂ ಆಧ್ಯಾತ್ಮಿಕ ಚಿಂತಕರಾಗಿದ್ದು, ಸುಮಾರು 244 ವಚನಗಳನ್ನು ರಚಿಸಿದ್ದಾರೆ. ನಿಜಸುಖಿ ಅಪ್ಪಣ್ಣ ಮತ್ತು ನಿಜಭಕ್ತಿ ಲಿಂಗಮ್ಮ ಅವರ ಜೀವನ ಹಾಗೂ ಕರ್ಮಗಳು ಬಸವಣ್ಣನವರಿಗೆ ಸಮರ್ಪಿತವಾಗಿದ್ದವು. ಮುಕ್ತಿ ಪಡೆಯಲು ಭಕ್ತಿ ಅವಶ್ಯಕ ಎಂಬ ಸಂದೇಶವನ್ನು ಅವರು ತಮ್ಮ ವಚನಗಳ ಮೂಲಕ ನೀಡಿದ್ದಾರೆ ಎಂದು ಹೇಳಿದರು.
ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಅಕ್ಕ ಗಂಗಾಬಿಕಾ ಪಾಟೀಲ್ ಆಶೀರ್ವಚನ ನೀಡಿ, ವಿದ್ಯಾರ್ಥಿಗಳಿಗೆ ಪಾಠ ಬೋಧಿಸುವ ಉಪನ್ಯಾಸಕರು ಬಸವತತ್ವ ಚಿಂತಕರಾಗಿರಬೇಕು. ಆಗ ಮಾತ್ರ ಉತ್ತಮ ಕುಟುಂಬಗಳು ಮತ್ತು ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಲಿಂಗಮ್ಮನವರ ವಚನಗಳು ಕುಟುಂಬದಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸುವ ಮಹತ್ವದ ಸಂದೇಶಗಳನ್ನು ಸಾರುತ್ತವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷೆ ಸುನೀತಾ ದಾಡಗೆ, ಕಲ್ಯಾಣರಾವ್ ಚಳಕಾಪೂರೆ, ವರ್ಷಾ ಬಿರಾದರ್, ಮಲ್ಲಿಕಾರ್ಜುನ್ ಹುಡಗೆ, ಉಮಾಕಾಂತ್ ಮೀಸೆ, ಹೇಮಲತಾ ವೀರಶೆಟ್ಟಿ ಹಾಗೂ ಶ್ರೀನಿವಾಸ್ ಬಿರಾದಾರ್ ಸೇರಿದಂತೆ ಇತರರು ಇದ್ದರು. ಸುವರ್ಣಾ ಚಿಮಕೊಡೆ ಸ್ವಾಗತಿಸಿದರು. ಶೈಲಜಾ ಚಳಕಾಪುರೆ ನಿರೂಪಿಸಿದರು. ರೋಹಿತ್ ಜಿರೊಬೆ ವಂದಿಸಿದರು.






