Bidar | ಡಾ.ಉಮಾ ದೇಶಮುಖ್‌ಗೆ ಐಎಂಎ ರಾಷ್ಟ್ರೀಯ ‘ಅಕಾಡೆಮಿಕ್ ಅವಾರ್ಡ್’

ಬೀದರ್ : ಬ್ರಿಮ್ಸ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ (ಎಚ್‌ಒಡಿ) ಹಾಗೂ ಅಸೋಸಿಯೇಟ್ ಪ್ರೊಫೆಸರ್ ಡಾ. ಉಮಾ ದೇಶಮುಖ್ ಅವರಿಗೆ ಭಾರತೀಯ ವೈದ್ಯಕೀಯ ಸಂಘ (ಐಎಂಎ), ನವದೆಹಲಿ ವತಿಯಿಂದ 2026ನೇ ಸಾಲಿನ ಪ್ರತಿಷ್ಠಿತ ರಾಷ್ಟ್ರೀಯ ‘ಅಕಾಡೆಮಿಕ್ ಅವಾರ್ಡ್’ ಪ್ರಶಸ್ತಿ ಲಭಿಸಿದೆ.
ವೈದ್ಯಕೀಯ ಶಿಕ್ಷಣ, ಮಹಿಳಾ ಆರೋಗ್ಯ ಸೇವೆ, ಶೈಕ್ಷಣಿಕ ಸಾಧನೆ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಡಾ. ಉಮಾ ದೇಶಮುಖ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರತಿಷ್ಠಿತ ಪ್ರಶಸ್ತಿಯನ್ನು ಜುಲೈ 18ರಂದು ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ನಡೆಯಲಿರುವ ರಾಷ್ಟ್ರೀಯ ವೈದ್ಯರ ದಿನಾಚರಣೆ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.
ಡಾ. ಉಮಾ ದೇಶಮುಖ್ ಅವರು ಪ್ರಸ್ತುತ ಕೆಎಸ್‌ಒಜಿಎ (2025-2027) ಮೆಡಿಕೋಲೀಗಲ್ ಸಮಿತಿಯ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸೂತಿ ಮತ್ತು ಸ್ತ್ರೀರೋಗ ಚಿಕಿತ್ಸೆ, ಬಂಜೆತನ ನಿವಾರಣಾ ಚಿಕಿತ್ಸೆ, ವೈದ್ಯಕೀಯ ಶಿಕ್ಷಣ ಹಾಗೂ ಮೆಡಿಕೋಲೀಗಲ್ ಜಾಗೃತಿ ಕ್ಷೇತ್ರಗಳಲ್ಲಿ ಅವರು ಗಮನಾರ್ಹ ಸೇವೆ ಸಲ್ಲಿಸಿದ್ದಾರೆ.
ಇದಲ್ಲದೆ, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ತರಬೇತಿಯಲ್ಲಿ ಅವರ ಕೊಡುಗೆ ಮಹತ್ವದ್ದಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಸೇವೆಗೆ ಈ ರಾಷ್ಟ್ರೀಯ ಪ್ರಶಸ್ತಿ ಮತ್ತೊಂದು ಗರಿ ಮೂಡಿಸಿದೆ.






