ಬೀದರ್ | ತಳವಾಡೆ ಆಸ್ಪತ್ರೆಯಲ್ಲಿ ಗರ್ಭಕಂಠ ಕ್ಯಾನ್ಸರ್ ಲಸಿಕೆ ಅಭಿಯಾನಕ್ಕೆ ಡಾ.ಗೀತಾ ಖಂಡ್ರೆ ಚಾಲನೆ

ಬೀದರ್ : ಮನೆಯ ಏಳಿಗೆಗಾಗಿ ಸಕಲವನ್ನೂ ಧಾರೆ ಎರೆಯುವ ಮಹಿಳೆಯರು ಆರೋಗ್ಯದ ಕಡೆಗೂ ಗಮನ ಹರಿಸಬೇಕು. ಕಾಲಕಾಲಕ್ಕೆ ಮಹಿಳೆಯರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯವಂತ ಬದುಕು ಸಾಗಿಸಬೇಕು ಎಂದು ಮಹಿಳೆಯರಿಗೆ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಡಾ.ಗೀತಾ ಖಂಡ್ರೆ ಸಲಹೆ ನೀಡಿದರು.
ಇಂದು ಭಾಲ್ಕಿ ಪಟ್ಟಣದಲ್ಲಿರುವ ತಳವಾಡೆ ಆಸ್ಪತ್ರೆಯಲ್ಲಿ ಬಿಒಜಿಎಸ್ ಮತ್ತು ಹೆಚ್ ಡಿ ಆರ್ ಹೆಲ್ತ್ ಕೇರ್ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ಗರ್ಭಕಂಠ ಕ್ಯಾನ್ಸರ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆಯರು ಕುಟುಂಬದ ನಿರ್ವಹಣೆ ಜತೆಗೆ ತಮ್ಮ ಆರೋಗ್ಯದ ಕಡೆಗೂ ಕಾಳಜಿ ವಹಿಸಬೇಕು. ಇದೀಗ ತಳವಾಡೆ ಆಸ್ಪತ್ರೆಯಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗೆ ಲಸಿಕೆ ನೀಡಲಾಗುತ್ತಿದ್ದು, ಎಲ್ಲ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು ಎಚ್ ಪಿ ವಿ ಲಸಿಕೆ ಪಡೆಯುವುದು ಅಗತ್ಯವಾಗಿದ್ದು, ಪರಿಣಾಮಕಾರಿಯು ಆಗಿದೆ. ಈ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ ಎಂದು ಭರವಸೆ ನೀಡಿದ ಅವರು, ಲಸಿಕೆ ಪಡೆಯಲು ಎಲ್ಲರೂ ಮುಂದೆ ಬಂದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ದೇಶದಲ್ಲಿ ಪ್ರತಿದಿನ ನೂರಾರು ಮಹಿಳೆಯರು ಗರ್ಭಕಂಠ ಕ್ಯಾನ್ಸರ್ ರೋಗಕ್ಕೆ ಮೃತರಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಎಚ್ ಪಿ ವಿ ಲಸಿಕೆ ಸಹಕಾರಿಯಾಗಿದೆ. 9 ರಿಂದ 14 ವರ್ಷದೊಳಗಿನ ಎಲ್ಲ ಬಾಲಕಿಯರು ಕಡ್ಡಾಯವಾಗಿ ಈ ಲಸಿಕೆ ಪಡೆದುಕೊಳ್ಳಬೇಕು. 15 ರಿಂದ 26 ವರ್ಷದೊಳಗಿನ ಮಹಿಳೆಯರು ಎರಡು ಡೋಸ್, 27 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರು ಮೂರು ಡೋಸ್ ಲಸಿಕೆ ಪಡೆದುಕೊಳ್ಳಬೇಕು ಎಂದು ಡಾ.ಲಲಿತಮ್ಮ ಮಾಹಿತಿ ನೀಡಿದರು.
ಚಾಲನೆ ನೀಡಿದ ಮೊದಲ ದಿನವೇ ಪಟ್ಟಣ ಸೇರಿ ಗ್ರಾಮೀಣ ಭಾಗದ ವಿವಿಧ ಭಾಗಗಳಿಂದ ನೂರಾರು ಮಹಿಳೆಯರು ಆಗಮಿಸಿ 130 ಮಹಿಳೆಯರು ಲಸಿಕೆ ಪಡೆದುಕೊಂಡು, ಲಸಿಕೆ ಜಾಗೃತಿ ಅಭಿಯಾನಕ್ಕೆ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಡಾ.ವಿಜಯಶ್ರೀ ಬಶೆಟ್ಟಿ, ಡಾ.ರಾಜಲಕ್ಷ್ಮಿ ಚಂದಾ, ಡಾ.ಅನಿಲಕುಮಾರ ತಳವಾಡೆ ಹಾಗೂ ಡಾ.ಉಮಾ ದೇಶಮುಖ ಸೇರಿದಂತೆ ಇತರರು ಉಪಸ್ಥಿತರಿದ್ದರು.







