ಬೀದರ್ | ಮಂಗಲಗಿವಾಡಿ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ : ಭೀಮ್ ಆರ್ಮಿಯಿಂದ ಧರಣಿಯ ಎಚ್ಚರಿಕೆ

ಬೀದರ್ : ಚಿಟಗುಪ್ಪ ತಾಲೂಕಿನ ಮಂಗಲಗಿವಾಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 6 ರಿಂದ 7 ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಕೂಡಲೇ ಸಮಸ್ಯೆ ಬಗೆಹರಿಸದಿದ್ದಲ್ಲಿ ಗ್ರಾಮ ಪಂಚಾಯಿತಿ ಎದುರು ಸಾಂಕೇತಿಕ ಧರಣಿ ನಡೆಸುವುದಾಗಿ ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿ ಸಂಘಟನೆ ಎಚ್ಚರಿಕೆ ನೀಡಿದೆ.
ಸಂಘಟಕರು ಶುಕ್ರವಾರ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಪ್ರಕಟಣೆ ಹೊರಡಿಸಿದ್ದು, ಶಾಲೆಯ ಮುಖ್ಯೋಪಾಧ್ಯಾಯರು 2026ರ ಡಿಸೆಂಬರ್ 28 ಹಾಗೂ ಜನವರಿ 3ರಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಎರಡು ಬಾರಿ ಲಿಖಿತವಾಗಿ ಮನವಿ ಸಲ್ಲಿಸಿದ್ದಾರೆ. ಸುಮಾರು ಎಂಟು ಬಾರಿ ಮೌಖಿಕವಾಗಿಯೂ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದಾರೆ. ಆದರೆ, ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ.
ಶಾಲೆಯಲ್ಲಿ ಬೋರ್‌ವೆಲ್ ಇದ್ದರೂ ಅದರ ಮೋಟರ್ ಕೆಟ್ಟಿರುವುದರಿಂದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಕುಡಿಯುವ ನೀರು, ಶೌಚಾಲಯ ಬಳಕೆ ಹಾಗೂ ಮಧ್ಯಾಹ್ನದ ಬಿಸಿಯೂಟ ತಯಾರಿಕೆಗೆ ಅಗತ್ಯವಾದ ನೀರಿನ ಕೊರತೆಯಿಂದ ಶಾಲೆಯ ದೈನಂದಿನ ಕಾರ್ಯಚಟುವಟಿಕೆಗಳು ಅಸ್ತವ್ಯಸ್ತಗೊಂಡಿವೆ ಎಂದು ದೂರಲಾಗಿದೆ.
ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ದೀಲಿಪಕುಮಾರ್ ವರ್ಮಾ ಅವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಮೃತರಾವ್ ಮರಕಲೆ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.
ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ದೀಲಿಪಕುಮಾರ್ ವರ್ಮಾ, ಗ್ರಾಮ ಘಟಕದ ಅಧ್ಯಕ್ಷ ಭರತ್ ಜಾಬಾ, ಶ್ರೀಕಾಂತ್ ಹೊಸಮನಿ, ಗ್ರಾಮಸ್ಥರಾದ ಓಂಕಾರ್ ಮೌರ್ಯ, ಸಾಗರ್ ಮೌರ್ಯ, ಇಸ್ಮಾಯಿಲ್, ಅಮೃತ್ ಜಾಬಾ, ಮುಖ್ಯೋಪಾಧ್ಯಾಯ ಇ.ಆರ್ ಚೌಡಯ್ಯ, ಶಾಲಾ ಸಿಬ್ಬಂದಿಗಳಾದ ಗೌತಮ್, ಶಿವಕುಮಾರ್, ಶಿವಪುತ್ರ, ಪ್ರಿಯಾಂಕಾ, ಶ್ಯಾವಂತಾ, ಉಷಾರಾಣಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






