ಬೀದರ್ | ಭಾರತ ಸಂಸ್ಕೃತಿಯಲ್ಲಿ ಮಾದಕ ವಸ್ತುಗಳಿಗೆ ನೆಲೆಯಿಲ್ಲ : ಎಂ.ಎಸ್.ಶ್ರೀಧರ್

ಬೀದರ್ : ಭಾರತ ಸಂಸ್ಕೃತಿಯಲ್ಲಿ ಮಾದಕ ವಸ್ತುಗಳಿಗೆ ನೆಲೆಯಿಲ್ಲ. ಆದರೂ ನಮ್ಮ ಯುವಪೀಳಿಗೆ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಂ.ಎಸ್.ಶ್ರೀಧರ್ ಅವರು ಕಳವಳ ವ್ಯಕ್ತಪಡಿಸಿದರು.
ಗುರುವಾರ ಔರಾದ್ ತಾಲ್ಲೂಕಿನ ಕಂದಗೂಳ ಗ್ರಾಮದ ಡಾ.ಬಾಬು ಜಗಜೀವನರಾಮ್ ಪ್ರೌಢ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹೇಮಾ ಎಜುಕೇಶನಲ್ ಐಂಡ್ ಚಾರಿಟೇಬಲ್ ಟ್ರಸ್ಟ್, ಭವಾನಿ ಮಹಿಳಾ ಮಂಡಳಿ ಹಾಗೂ ಸಂಯುಕ್ತ ಶಿಕ್ಷಣ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಾದಕ ವಸ್ತು ವಿರೋಧ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಈಗಿನ ಒತ್ತಡದ ಜಗತ್ತಿನಲ್ಲಿ ಯುವ ಜನತೆ ವೇಗಕ್ಕೆ ತಾಳ ಹಾಕಲು ತಪ್ಪು ದಾರಿ ಹಿಡಿಯುತ್ತಿದ್ದಾರೆ. ನಮ್ಮ ಇಂದಿನ ಜೀವನ ಶೈಲಿಯಲ್ಲಿ ಮೋಜು, ಮಸ್ತಿ, ತಡ ರಾತ್ರಿಯ ಪಾರ್ಟಿ ಇತ್ಯಾದಿಗಳು ಮಾಮೂಲಿಯಾಗಿವೆ. ಈ ಹಂತದಲ್ಲಿ ಹದಿಹರೆಯದ ಯುವ ಜನರು ದಾರಿ ತಪ್ಪುವುದು ಸಾಮಾನ್ಯವಾಗಿದೆ. ಈ ದಿಸೆಯಲ್ಲಿ ತಮ್ಮ ಮಕ್ಕಳಿಗೆ ತಂದೆ ತಾಯಂದಿರ ಆಸರೆ, ಮಾರ್ಗದರ್ಶನ ಅವಶ್ಯಕವಾಗಿದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಉಪನ್ಯಾಸಕ ಟಿ.ಜೆ.ಹಾದಿಮನಿ, ಹಿರಿಯ ಸಾಹಿತಿ ವಿಜಯಲಕ್ಷ್ಮೀ ಕೌಟಗೆ, ಪ್ರಾಂಶುಪಾಲ ಮೈಜೊದ್ದಿನ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ರತ್ನ ಸುಭಾಷ್, ನಿಟ್ಟೂರ ಪಾಲಿಟೆಕ್ನಿಕ್ ಕಾಲೇಜಿನ ಅಧ್ಯಕ್ಷ ಬಸವರಾಜ್ ಪಾಟೀಲ್, ನಾಗರಾಜ್ ಹುಲಸೂರೆ, ಜಿಲ್ಲಾ ಮಹಿಳಾ ದೂರು ನಿರ್ವಹಣಾ ಸಮಿತಿ, ಕರ್ನಾಟಕ ಲೋಕಯುಕ್ತ ಹಾಗೂ ಡಾ. ಬಾಬು ಜಗಜೀವನರಾಮ ಪ್ರೌಢ ಶಾಲೆಯ ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.







