Bidar | ಕರ್ತವ್ಯಲೋಪ ಆರೋಪ : ಭಾಲ್ಕಿಯ ಮೊರಾರ್ಜಿ ವಸತಿ ಶಾಲೆಯ ಮುಖ್ಯಗುರು ಅಮಾನತು

ಬೀದರ್: ಶೈಕ್ಷಣಿಕ ನಿರ್ಲಕ್ಷ್ಯ ಹಾಗೂ ಕರ್ತವ್ಯಲೋಪದಿಂದಾಗಿ ವಿದ್ಯಾರ್ಥಿಗಳ ಫಲಿತಾಂಶ ಕುಂಠಿತಗೊಂಡಿದೆ ಎಂದು ಆರೋಪಿಸಿ ಭಾಲ್ಕಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮುಖ್ಯಶಿಕ್ಷಕ ಶಂಕರ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಕಾಂತರಾಜು ಅವರು ಈ ಅಮಾನತು ಆದೇಶ ಹೊರಡಿಸಿದ್ದಾರೆ. ಶಾಲೆಯ ಆಡಳಿತ ಮತ್ತು ಶೈಕ್ಷಣಿಕ ಗುಣಮಟ್ಟ ಕಾಪಾಡುವಲ್ಲಿ ಮುಖ್ಯಶಿಕ್ಷಕರು ವಿಫಲರಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
2024-25ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಯ 21 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ಕೇವಲ ಶೇ.43.24 ರಷ್ಟು ಫಲಿತಾಂಶ ದಾಖಲಾಗಿದೆ. ಇದರಿಂದಾಗಿ ಈ ಶಾಲೆಯು ಜಿಲ್ಲೆ ಹಾಗೂ ರಾಜ್ಯ ಮಟ್ಟದ ವಸತಿ ಶಾಲೆಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಶಿಕ್ಷಕರ ಬೋಧನಾ ಪ್ರಕ್ರಿಯೆ, ವಿದ್ಯಾರ್ಥಿಗಳ ದೈನಂದಿಕ ಚಟುವಟಿಕೆಗಳು ಹಾಗೂ ಕಲಿಕಾ ಪ್ರಗತಿಯ ಬಗ್ಗೆ ನಿಯಮಿತವಾಗಿ ಅವಲೋಕನ ನಡೆಸಿಲ್ಲ. ಎಸೆಸೆಲ್ಸಿ ಪರೀಕ್ಷೆಗಾಗಿ ವಿಷಯವಾರು ಗುರಿ ನಿಗದಿಪಡಿಸದಿರುವುದು, ದಿನವಹಿ ಕ್ಯಾಲೆಂಡರ್ ಸಿದ್ಧಪಡಿಸದಿರುವುದು ಹಾಗೂ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಪೂರೈಸದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಶಿಕ್ಷಕರೊಂದಿಗೆ ಪ್ರತಿ ಶನಿವಾರ ಸಭೆ ನಡೆಸಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ಚರ್ಚಿಸಿಲ್ಲ ಹಾಗೂ ಪೋಷಕರ ಸಭೆಯನ್ನು ನಿಯಮಿತವಾಗಿ ಆಯೋಜಿಸಿಲ್ಲ ಎಂಬುದು ಸಾಬೀತಾಗಿದೆ.
ಮುಖ್ಯಶಿಕ್ಷಕರ ಬೇಜವಾಬ್ದಾರಿತನದಿಂದ ನೂರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗಿರುವ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.





