Bidar | ಸೆ.17ರಂದು ನಡೆಯುವ 371(ಜೆ) ಅನುಷ್ಠಾನ ಹೋರಾಟಕ್ಕೆ ಡಿವೈಎಫ್‌ಐ ಬೆಂಬಲ : ಶಶಿಕಾಂತ್ ಡಾಂಗೆ

ಬೀದರ್: 371(ಜೆ) ಕಾಯಿದೆ ಜಾರಿಗೆ ಬಂದು ಹಲವು ವರ್ಷಗಳು ಕಳೆದರೂ ಕಲ್ಯಾಣ ಕರ್ನಾಟಕ ಭಾಗ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾಣದ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸೆ.17ರಂದು ಕಲಬುರಗಿಯಲ್ಲಿ ಆಯೋಜಿಸಿರುವ ಹೋರಾಟಕ್ಕೆ ಡಿವೈಎಫ್‌ಐ ಬೆಂಬಲ ನೀಡಲಿದೆ ಎಂದು ಜಿಲ್ಲಾ ಸಂಚಾಲಕ ಶಶಿಕಾಂತ್ ಡಾಂಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆದ ದೀರ್ಘ ಹೋರಾಟದ ಫಲವಾಗಿ ಸಂವಿಧಾನದ 371(ಜೆ) ತಿದ್ದುಪಡಿ ಜಾರಿಯಾಯಿತು. ಅದರ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯೂ ರಚನೆಯಾಯಿತು. ಕಳೆದ 12 ವರ್ಷಗಳಲ್ಲಿ ಈ ಭಾಗದ ಅಭಿವೃದ್ಧಿಗಾಗಿ ಸುಮಾರು 20 ಸಾವಿರ ಕೋಟಿ ರೂ. ಅನುದಾನ ವೆಚ್ಚ ಮಾಡಲಾಗಿದೆ. ಆದರೂ ಪ್ರಾದೇಶಿಕ ಅಸಮತೋಲನ ನಿವಾರಣೆಯಾಗುವ ಬದಲು ಇನ್ನಷ್ಟು ಹೆಚ್ಚಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕಲ್ಯಾಣ ಕರ್ನಾಟಕಕ್ಕೆ ಬಿಡುಗಡೆಯಾಗಿರುವ ಅನುದಾನವನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಅಭಿವೃದ್ಧಿ ಮಂಡಳಿ ಹಾಗೂ ಜನಪ್ರತಿನಿಧಿಗಳು ಅನಗತ್ಯ ನಿಯಮಾವಳಿಗಳಿಂದ ಅಸಹಾಯಕರಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಭಾಗದ 40ಕ್ಕೂ ಹೆಚ್ಚು ಶಾಸಕರು ಕ್ರಿಯಾ ಯೋಜನೆ ರೂಪಿಸುವಲ್ಲಿ ನಿರ್ಬಂಧಗಳನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿಎಜಿ ವರದಿಯ ಪ್ರಕಾರ 7 ಸಾವಿರ ಕೋಟಿ ರೂ. ಗೂ ಅಧಿಕ ಮೊತ್ತದ ಅನುದಾನದಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ಉಲ್ಲೇಖವಿದೆ ಎಂದು ಹೇಳಿರುವ ಶಶಿಕಾಂತ್ ಡಾಂಗೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯಾವ ಉದ್ದೇಶಕ್ಕಾಗಿ ಸ್ಥಾಪನೆಯಾಗಿತ್ತೋ, ಆ ಉದ್ದೇಶವನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಸೆ.17ರಂದು ಕಲಬುರಗಿಯಲ್ಲಿ ನಡೆಯಲಿರುವ ಹೋರಾಟದಲ್ಲಿ ಯುವಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಧ್ವನಿಯಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.






