ಬೀದರ್ | ಸೈನಿಕ ಶಾಲೆಯ ವಿದ್ಯಾರ್ಥಿಗಳಿಂದ ಗ್ರಹಣ ವೀಕ್ಷಣೆ

ಬೀದರ್ : ಅಲ್ಪ ಉಪಹಾರ ಸೇವಿಸುವ ಮೂಲಕ ನಗರದ ಸೈನಿಕ ಶಾಲೆಯ ವಿದ್ಯಾರ್ಥಿಗಳು ಇಂದು ರಾತ್ರಿ ಗ್ರಹಣ ವೀಕ್ಷಣೆ ಮಾಡಿದರು.
ನಗರದ ಹೈದರಾಬಾದ್ ಕರ್ನಾಟಕ ಎಜುಕೇಶನ್ ಸೊಸೈಟಿಯ ಸೈನಿಕ್ ಶಾಲೆ ಹಾಗೂ ಜಿಲ್ಲಾ ವಿಜ್ಞಾನ ಸಮಿತಿ ಸಂಯುಕ್ತ ಆಶ್ರಯದಲ್ಲಿ, ಬಿ.ವಿ.ಭೂಮರಡ್ಡಿ ಕಾಲೇಜು ಕ್ಯಾಂಪಸ್‌ನ ಆವರಣದಲ್ಲಿ ಇಂದು ರಾತ್ರಿ ಬಾಹ್ಯಾಕಾಶದಲ್ಲಿ ನಡೆದ ವಿಸ್ಮಯ ಚಂದ್ರ ಗ್ರಹಣವನ್ನು ಸೈನಿಕ ಶಾಲೆಯ ನೂರಾರು ವಿದ್ಯಾರ್ಥಿ, ಸಿಬ್ಬಂದಿ ಹಾಗೂ ಸಾರ್ವಜನಿಕರು ಕಣ್ತುಂಬಿಕೊಂಡರು.
ಸಂಪೂರ್ಣ ರಕ್ತ ಚಂದ್ರಗ್ರಹಣ ವೀಕ್ಷಣಗೆ ಟೆಲಿಸ್ಕೋಪ್ ಹಾಗೂ ಬೈನಾಕುಲರ್ ವ್ಯವಸ್ಥೆ ಮಾಡಲಾಗಿತ್ತು. ಗ್ರಹಣದ ದೃಶ್ಯಗಳನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು. ಚಂದ್ರ ಗ್ರಹಣವನ್ನನು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೋರಿಸಲಾಯಿತು.
ಅದೇ ರೀತಿ ಗ್ರಹಣದ ಸಮಯದಲ್ಲಿ ಆಹಾರ ಸೇವನೆಯನ್ನು ಮಾಡಬಾರದು ಎಂಬ ಮೂಡನಂಬಿಕೆ ಇದ್ದು, ಇದನ್ನು ಅಲ್ಲಗಳೆದು ಅಲ್ಪೋಪಹಾರ ನೀಡುವ ಮೂಲಕ ಮಕ್ಕಳಿಗೆ ವೈಚಾರಿಕತೆಯ ಪಾಠ ಮಾಡಲಾಯಿತು.
ಈ ವೇಳೆ ಜಿಲ್ಲಾ ವಿಜ್ಞಾನ ಕೇಂದ್ರದ ಅಧ್ಯಕ್ಷ ಬಾಬುರಾವ್ ದಾನಿ ಅವರು ಮಾತನಾಡಿ, ಗ್ರಹಣ ಎಂಬುದು ಬಾಹ್ಯಾಕಾಶದಲ್ಲಿ ನಡೆಯುವ ಒಂದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಇದರ ಬಗ್ಗೆ ಕೆಲವು ಮೂಡನಂಬಿಕೆಗಳಿದ್ದು, ಅವೆಲ್ಲ ಕೇವಲ ಕಪೋಲ ಕಲ್ಪಿತ ಯೋಚನೆಗಳಾಗಿವೆ. ಊಟ ಮಾಡಬಾರದು, ಗ್ರಹಣದ ಪೂರ್ವದಲ್ಲಿ ಮತ್ತು ನಂತರ ಸ್ನಾನ ಮಾಡಬೇಕು ಎಂಬ ಸಂಪ್ರದಾಯಗಳನ್ನು ಮಾಡಲಾಗಿದೆ. ಆದರೆ, ಅದೆಲ್ಲವೂ ಗೊಡ್ಡು ಆಚರಣೆಗಳಾಗಿದ್ದು, ಗ್ರಹಣದಿಂದ ಮನುಷ್ಯರಿಗೆ ಯಾವುದೇ ತೊಂದರೆಗಳಾಗುವುದಿಲ್ಲ ಎಂದು ತಿಳಿಸಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ರಜನೀಶ್ ವಾಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಬಿ.ವಿ.ಬಿ ಕಾಲೇಜಿನ ಪ್ರಾಂಶುಪಾಲ ಡಾ.ವಿಠಲ್ ರೆಡ್ಡಿ, ಉತ್ತರ ಕರ್ನಾಟಕ ಸುದ್ದಿವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ಆದೀಶ್ ವಾಲಿ, ಸೈನಿಕ ಶಾಲೆಯ ಪ್ರಾಂಶುಪಾಲೆ ಡಾ.ಶ್ರೀಲತಾ ಸ್ವಾಮಿ, ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಕಲಾಲ ದೇವಿ ಪ್ರಸಾದ್ ಹಾಗೂ ಜಿಲ್ಲಾ ವಿಜ್ಞಾನ ಕೇಂದ್ರದ ಜಂಟಿ ಕಾರ್ಯದರ್ಶಿ ಮಹಮ್ಮದ್ ರಫಿ ತಾಳಿಕೋಟಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







