ಬೀದರ್ | ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಿ : ಶಾಸಕ ಪ್ರಭು ಚವ್ಹಾಣ್

ಬೀದರ್ : ಔರಾದ್ ವಿಧಾನಸಭಾ ಕ್ಷೇತ್ರದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಕಟ್ಟಡ, ಶಿಕ್ಷಕರು ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯ ಕಲ್ಪಿಸಿ, ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ದಾಖಲಿಸಿ ಓದಿಸಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಅವರು ಹೇಳಿದರು.
ಇಂದು ಔರಾದ್ ತಾಲ್ಲೂಕಿನ ಬೋರಾಳ್ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲ ಅಭಿವೃದ್ಧಿಗಳಿಗೆ ಶಿಕ್ಷಣವೇ ಆಧಾರ ಸ್ಥಂಬವಾಗಿದೆ ಎಂದು ನಂಬಿರುವ ನಾನು, ಶಾಸಕನಾದ ನಂತರ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಪ್ರತಿ ಹಳ್ಳಿಯಲ್ಲಿ ಶಾಲೆ ನಿರ್ಮಿಸಿದ್ದು, ಅಗತ್ಯ ಸೌಕರ್ಯಗಳು ಒದಗಿಸುತ್ತಿದ್ದೇನೆ ಎಂದರು.
ಎಲ್ಲ ಕಡೆಗಳಲ್ಲಿ ಖಾಸಗಿ ಶಾಲೆಗಳ ಹಾವಳಿ ಹೆಚ್ಚಾಗಿದೆ. ಶಿಕ್ಷಣದ ಹೆಸರಿನಲ್ಲಿ ಬಡ ಜನರ ಸುಲಿಗೆ ನಡೆಯುತ್ತಿದೆ. ಹಣ ಪಾವತಿಸಲು ಸಾರ್ವಜನಿಕರು ನಾನಾ ರೀತಿಯ ಸಂಕಷ್ಟಗಳು ಎದುರಿಸುತ್ತಿರುವುದು ನಾನು ಕಣ್ಣಾರೆ ನೋಡಿದ್ದೇನೆ. ಹಾಗಾಗಿ ಖಾಸಗಿ ಶಾಲೆಯವರ ಬಣ್ಣದ ಮಾತುಗಳಿಗೆ ಮರುಳಾಗಿ ಹಣ ಕಳೆದುಕೊಳ್ಳಬೇಡಿ ಎಂದು ಪೋಷಕರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಹೇಶ್ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ.ರಂಗೇಶ್, ಅರಣ್ಯಾಧಿಕಾರಿ ಗಜಾನಂದ್, ಮುದ್ದಸಿರ್ ಅಹ್ಮದ್, ಮುಖಂಡರಾದ ಧೊಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ್ ಪಾಟೀಲ್, ಶಿವರಾಜ್ ಅಲ್ಮಾಜೆ, ಮುಹಮ್ಮದ್ ನಝೀರ್, ಮುಖ್ಯಗುರು ರಾಜೇಂದ್ರ, ಸರ್ಕಾರಿ ನೌಕರರ ಸಂಘದ ತಾಲ್ಲೂಕಾಧ್ಯಕ್ಷ ಪಂಢರಿ ಆಡೆ, ತಾಲ್ಲೂಕು ಕಸಾಪ ಅಧ್ಯಕ್ಷ ಬಾಲಾಜಿ ಅಮರವಾಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮೀ ಪಾಟೀಲ್, ಶಿವಶಂಕರ್ ಮಣಿಗೆಂಪೂರ್, ಸಹದೇವ್ ಮಚಕೂರೆ, ನಿವರ್ತಿ ಪಾಟೀಲ್, ಬಜರಂಗ್ ಪಾಂಡ್ರೆ, ಗಣಪತರಾವ್ ಮಚಕೂರೆ, ಪ್ರದೀಪ್ ಗುಬನೂರೆ, ದೇವಿದಾಸ್ ಪಾಂಡ್ರೆ ಹಾಗೂ ಜಗನ್ನಾಥ್ ಮಚಕೂರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.







