Bidar | ಕಲೆ, ಸಂಗೀತದಿಂದ ಶಿಕ್ಷಣ ಪರಿಪೂರ್ಣ: ಶರಣ ಉರಲಿಂಗಪೆದ್ದಿ
‘ಶಿಕ್ಷಣದಲ್ಲಿ ಕಲೆ’ ಕಾರ್ಯಕ್ರಮ

ಬೀದರ್: ಶಿಕ್ಷಣವೆಂಬುದು ಕೇವಲ ಶಾಲೆಯಲ್ಲಿ ಕಲಿಯುವ ಪಾಠಗಳಿಗೆ ಸೀಮಿತವಾಗಿರದೆ, ಸಂಗೀತ, ಸಾಹಿತ್ಯ, ಅಭಿನಯ ಸೇರಿದಂತೆ ವಿವಿಧ ಕಲೆಗಳನ್ನು ಒಳಗೊಂಡಾಗ ಪರಿಪೂರ್ಣ ಶಿಕ್ಷಣವಾಗುತ್ತದೆ. ಕಲೆಯು ಜಗತ್ತಿಗೆ ಸೌಂದರ್ಯ ನೀಡಿದರೆ, ಸಂಗೀತವು ಮನಸ್ಸಿಗೆ ಮಾಧುರ್ಯ ನೀಡುತ್ತದೆ ಎಂದು ಶರಣ ಉರಲಿಂಗಪೆದ್ದಿ ಹೇಳಿದರು.
ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ಜವಾಹರ್ ನವೋದಯ ವಿದ್ಯಾಲಯದಲ್ಲಿ ‘ಶಿಕ್ಷಣದಲ್ಲಿ ಕಲೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಗಳು ಕೇವಲ ಜ್ಞಾನ ನೀಡುವ ತಾಣಗಳಾಗದೆ, ಮನುಷ್ಯರಲ್ಲಿ ಮಾನವೀಯ ಮೌಲ್ಯಗಳು ಬೆಳೆದುಬರುವಂತಹ ಸ್ಫೂರ್ತಿಯ ಸೆಲೆಯಾಗಬೇಕು. ಆಗ ಮಾತ್ರ ನಿಜವಾದ ಶಿಕ್ಷಣ ದೊರೆತಂತಾಗುತ್ತದೆ. ಶಿಕ್ಷಣವು ಕೇವಲ ಉದ್ಯೋಗ ದೊರಕಿಸಿಕೊಡುವ ಸಾಧನವಾಗದೆ, ಸುಂದರ ಬದುಕನ್ನು ನಿರ್ಮಿಸುವ ಸಾಧನವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಬುಚ್ಚಿ ರೆಡ್ಡಿ ಮಾತನಾಡಿ, ಕಲೆಗಳನ್ನು ಉಳಿಸುವುದು ಮಾತ್ರವಲ್ಲದೆ, ಅವು ಪರಂಪರೆಯ ರಕ್ಷಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತವೆ. ಕಲೆಯ ಮೂಲಕ ಮಾನವೀಯ ಮೌಲ್ಯಗಳು ಮನುಷ್ಯನಲ್ಲಿ ಶಾಶ್ವತವಾಗಿ ಮೂಡಿಬರುತ್ತವೆ ಎಂದರು.
ಕರ್ನಾಟಕದ ಸುಮಾರು 20 ಜಿಲ್ಲೆಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಲಾ ಪ್ರದರ್ಶನ, ಗಾಯನ, ಕಥೆ ಹೇಳುವುದು, ಚಿತ್ರ ಬಿಡಿಸುವುದು ಹಾಗೂ ಬಿಡಿಸಿದ ಚಿತ್ರಗಳ ವಸ್ತು ಪ್ರದರ್ಶನ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಈ ವೇಳೆ ತೀರ್ಪುಗಾರರಾಗಿ ಸಂತೋಷ್ ಕಾಮಶೆಟ್ಟಿ, ಹನುಮಂತರಾವ್, ಸಂಗಯ್ಯ ಸ್ವಾಮಿ, ಕಪಿಲ್ ಕುಮಾರ್, ರಾಮಚಂದ್ರ ಭಜಂತ್ರಿ, ಮಹಾಂತೇಶ್ ಹರವಾಳ್, ಶರಣಬಸಪ್ಪ ಬಿರಾದಾರ್ ಹಾಗೂ ಸಂತೋಷಕುಮಾರ್ ಹುಲ್ಸೂರೆ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಅಲ್ಕಾ, ಶ್ರೀಶೈಲಪ್ಪ, ಲಕ್ಷ್ಮೀಕಾಂತ್ ದುದ್ದಣಗಿ, ಸತೀಶಕುಮಾರ್ ಸ್ವಾಮಿ, ರಾಜೇಶ್ವರ್, ಚೇತನಕುಮಾರ್ ಜಂಬಗಿ, ಸಂಜು ರಾಥೋಡ್, ರಶ್ಮಿ, ಚಿನ್ಮಯಿ, ಲಕ್ಷ್ಮೀ, ಪ್ರಕಾಶ್ ಶಹಾ, ಮದನಲಾಲ್ ತುರೆ ಹಾಗೂ ಮೌನೇಶ್ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.
ಪ್ರಾಚಾರ್ಯ ನಾಗರಾಜನ್ ಸ್ವಾಗತಿಸಿದರು. ಧರ್ಮಣ್ಣ ಚಿಟ್ಟಾ ನಿರೂಪಿಸಿದರು. ಸುನೈನಾ ಮತ್ತು ನಂದಿನಿ ವಂದನಾರ್ಪಣೆ ಸಲ್ಲಿಸಿದರು.






