ಬೀದರ್ | ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವಂತೆ ರೈತರನ್ನು ಪ್ರೇರೇಪಿಸಿ : ಡಾ.ಎಸ್.ವಿ. ಪಾಟೀಲ್

ಬೀದರ್ : ಕೃಷಿ ಸಖಿಯರು ಪ್ರಸ್ತುತ ನೈಸರ್ಗಿಕ ಕೃಷಿ ತರಬೇತಿಯ ಸುದುಪಯೋಗ ಪಡೆದುಕೊಂಡು ಹೆಚ್ಚಿನ ರೈತರಿಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಿ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ಬೀದರ್ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಹಾಗೂ ತರಬೇತಿಯ ಆಯೋಜಕ ಡಾ.ಎಸ್.ವಿ. ಪಾಟೀಲ್ ಅವರು ಸಲಹೆ ನೀಡಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟ, ತೋಟಗಾರಿಕಾ ಮಹಾವಿದ್ಯಾಲಯ ಬೀದರ್ ಮತ್ತು ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಇದರ ಸಹಯೋಗದಲ್ಲಿ ಬೀದರ್ ಜಿಲ್ಲೆಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ (ಕೃಷಿ ಸಖಿಗಳಿಗೆ) ಬೀದರ್ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ 'ನೈಸರ್ಗಿಕ ಕೃಷಿ' ಕುರಿತು ಐದು ದಿನಗಳ ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೀಟನಾಶಕಗಳು, ಹಸುವಿನ ಗಂಜಲ, ಗೋಮೂತ್ರ, ಬೆಲ್ಲ, ದ್ವಿದಳ ಧಾನ್ಯಗಳ ಹಿಟ್ಟಿನ ಮಿಶ್ರಣಗಳ ಬಳಕೆಯನ್ನು ಅಳವಡಿಸಿ ಬೆಳೆಗಳಿಗೆ ಅಗತ್ಯ ಪೋಷಕಾಂಶ ಒದಗಿಸುವುದು, ಮಣ್ಣನ್ನು ಹದವಾಗಿಸುವುದು, ಮಣ್ಣಿನಲ್ಲಿನ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದು, ಹೊರಗಿನ ಯಾವುದೇ ಪರಿಕರಗಳನ್ನು ಖರೀದಿಸದೆ ಕೈಗೊಳ್ಳುವ ಕೃಷಿಯನ್ನು ನೈಸರ್ಗಿಕ ಕೃಷಿ ಪದ್ಧತಿಯಾಗಿದೆ ಎಂದರು.
ಈ ಕೃಷಿ ಪದ್ಧತಿಯಲ್ಲಿ ಹಲವಾರು ರೀತಿಯ ಪರಿಕರಗಳನ್ನು ರೈತರು ತಯಾರಿಸಿ ಬಳಸುವುದು ಉತ್ತಮ. ಇದರಿಂದ ರೈತರಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ನೈಸರ್ಗಿಕವಾಗಿ ರೈತರ ಕ್ಷೇತ್ರದಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ತಯಾರು ಮಾಡುವ ಜೈವಿಕ ನಿಯಂತ್ರಣ ಪರಿಕರಗಳು, ಸಸ್ಯಜನ್ಯ ಕೀಟನಾಶಕಗಳನ್ನು ಬಳಸಬೇಕು. ವಿವಿಧ ರೀತಿಯ ಕೀಟನಾಶಕಗಳು, ಅತೀ ಹೆಚ್ಚು ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಕ್ಷೀಣಿಸುತ್ತಿದೆ ಮತ್ತು ಮಾನವನ ದೇಹದ ಮೇಲೆ ಕೂಡ ದುಷ್ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.
ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್ ಮಾತನಾಡಿ, ರೈತರು ಸಾಂಪ್ರದಾಯಿಕ ಕೃಷಿಯಿಂದ ಹೊರಬಂದು ಅದರಲ್ಲೂ ಏಕ ಕೃಷಿ ಪದ್ಧತಿಗೆ ಜೋತು ಬೀಳದೆ ಹೊಸ ಪ್ರಯೋಗಗಳನ್ನು ಕೈಗೊಳ್ಳಬೇಕು. ಕೃಷಿ ಬೆಳೆಗಳಲ್ಲಿ ಅತೀ ಹೆಚ್ಚು ರಾಸಾಯನಿಕ ಕೀಟನಾಶಕ ಮತ್ತು ಗೊಬ್ಬರಗಳನ್ನು ಬಳಕೆ ಮಾಡುತ್ತಿರುವುದರಿಂದ ಹವಾಮಾನದಲ್ಲಿ ತುಂಬಾ ವೈಪರೀತ್ಯ ಉಂಟಾಗಿ, ಮಾನವನ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ. ರಾಸಾಯನಿಕ ಮುಕ್ತ ಕೃಷಿಗೆ ಒತ್ತು ನೀಡುತ್ತಾ, ನೈಸರ್ಗಿಕ ಕೃಷಿ ಕಡೆಗೆ ರೈತರು ಒತ್ತು ನೀಡುತ್ತಿರುವುದು ಇತ್ತೀಚೆಗಿನ ಬೆಳವಣಿಗೆಯಾಗಿದೆ. ಬಹುಬೆಳೆ, ಕೃಷಿ ಜೊತೆಗೆ ಸಾವಯವ ಕೃಷಿಯೂ ಗಮನಾರ್ಹವಾಗಿದೆ. ಆರೋಗ್ಯದ ಹಿತದೃಷ್ಟಿಯಿಂದ ಜನರು ಕೂಡ ಸಾವಯವ ಬೆಳೆಯನ್ನು ಬಳಸುತ್ತಿರುವುದರಿಂದ ಬೇಡಿಕೆ ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆ ರೈತರು ಕೃಷಿಯನ್ನು ಅಳವಡಿಸಿಕೊಂಡರೆ ಲಾಭ ಗಳಿಸಲು ಸಾಧ್ಯವಾಗಲಿದೆ ಎಂದು ಸಲಹೆ ನೀಡಿದರು.
ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ವಿಶ್ವನಾಥ್ ಝಿಳ್ಳೆ ಮಾತನಾಡಿ, ಸಾವಯವ ಕೃಷಿಯು ಮಣ್ಣಿನ ಗುಣಮಟ್ಟವನ್ನು ಕಾಪಾಡುತ್ತದೆ. ಹಾಗೆಯೇ ಉತ್ತಮ ಫಲಿತಾಂಶಗಳನ್ನು ದೊರಕಿಸುತ್ತದೆ. ಸಾವಯವ ಕೃಷಿಯ ಮೂಲಕ ಬೆಳೆದ ಬೆಳೆ ವಿಪುಲವಾದ ಪೋಷಕಾಂಶಗಳಿಂದ ತುಂಬಿರುತ್ತದೆ. ಇದು ಆಹಾರದ ನೈಸರ್ಗಿಕ ರುಚಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸಾಮಾನ್ಯ ಕೃಷಿಯಲ್ಲಿ ಬಳಸುವ ಹಾನಿಕಾರಕ ರಾಸಾಯನಿಕಗಳಿಂದ ನಮ್ಮನ್ನು ದೂರವಿರಿಸುತ್ತದೆ ಎಂದು ಹೇಳಿದರು.
ಸಾವಯವ ಕೃಷಿಯಲ್ಲಿ ಸಸ್ಯರೋಗದ ಅಪಾಯಗಳು ಕಡಿಮೆ ಹೀಗಾಗಿ ವೆಚ್ಚ ಕಡಿಮೆ ಮತ್ತು ಉತ್ಪಾದನೆಯು ರೈತರಿಗೆ ಹೆಚ್ಚು ಲಾಭದಾಯಕವಾಗಿರುತ್ತದೆ. ಸಾವಯವವಾಗಿ ಬೆಳೆದ ಆಹಾರ ಧಾನ್ಯಗಳಿಗೆ ವಿದೇಶದಲ್ಲಿ ಬೇಡಿಕೆ ಹೆಚ್ಚು. ನಮ್ಮ ರೈತರು ಹೆಚ್ಚಿನ ರೀತಿಯಲ್ಲಿ ರಫ್ತು ಮಾಡಿ ತಮ್ಮ ಆದಾಯವನ್ನು ಸಹ ದ್ವಿಗುಣಗೊಳಿಸಿಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಕಮಠಾಣ ಗ್ರಾಮದ ಪ್ರಗತಿಪರ ನೈಸರ್ಗಿಕ ಕೃಷಿ ರೈತ ವೈಜನಾಥ್ ನಿಡೋದ, ಸಂಯೋಜಕರು, ಸಹಾಯಕ ಪ್ರಾಧ್ಯಾಪಕರು ಹಾಗೂ ವಿಸ್ತರಣಾ ಮುಂದಾಳು ಡಾ.ವಿ.ಪಿ. ಸಿಂಗ್ ಹಾಗೂ ಸಹ ಸಂಯೋಜಕ ಡಾ.ಅಂಬರೀಶ್ ಸೇರಿದಂತೆ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ, ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.







