ಬೀದರ್ | ಆಧಾರ್ ಗುರುತಿನ ಚೀಟಿ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ್ : ಜಿಲ್ಲೆಯ ಎಲ್ಲಾ ನಾಗರಿಕರು ಮೌಲ್ಯಯುತವಾಗಿರುವ ಆಧಾರ್ ಗುರುತಿನ ಚೀಟಿ ಹೊಂದುವುದು ಅವಶ್ಯಕವಾಗಿದೆ. ಹೊಸ ನೋಂದಣಿ, ಮರು ನೋಂದಣಿಗಾಗಿ ಬಯೋಮೆಟ್ರಿಕ್ ನೀಡುವ ಮೂಲಕ ಆಧಾರ್ ಗುರುತಿನ ಚೀಟಿ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.
ಬೀದರ್ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ʼಜಿಲ್ಲಾ ಮಟ್ಟದ ಆಧಾರ್ ಮಾನಿಟರಿಂಗ್ ಕಮೀಟಿಯ ಸಭೆʼಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 5 ವರ್ಷ ಮೇಲ್ಪಟ್ಟ 1,23,830 ಮಕ್ಕಳು, 15 ವರ್ಷ ಮೇಲ್ಪಟ್ಟ 79,033 ಸೇರಿದಂತೆ 2,02,863 ಜನರ ಆಧಾರ್ ನವೀಕರಣ ಬಾಕಿಯಿದೆ. ಶಾಲಾ ವಿದ್ಯಾರ್ಥಿಗಳು ಕ್ಲಸ್ಟರ್ ಮಟ್ಟದಲ್ಲಿ ಆಧಾರ್ ಕ್ಯಾಂಪ್ ನಿಯೋಜಿಸಿ ಬಯೋಮೆಟ್ರಿಕ್ ಮಾಡಿಸಬೇಕು. 1,30,923 ಆಧಾರ್ ಕಾರ್ಡ್ ಗಳಿಗೆ ಮೊಬೈಲ್ ನಂಬರ್ ಅಪಡೇಟ್ ಇಲ್ಲ. ಇವರು ಹತ್ತಿರದ ಅಂಚೆ ಕಚೇರಿಗೆ ಭೇಟಿ ಮಾಡಿ ಮೊಬೈಲ್ ಅಪಡೇಟ್ ಮಾಡಿಕೊಳ್ಳಬೇಕು ಎಂದಿದ್ದಾರೆ.
ಜಿಲ್ಲೆಯ 19,46,492 ಲಕ್ಷ ಜನ ಆಧಾರ್ ನೋಂದಣಿ ಮಾಡಿಸಿದ್ದಾರೆ. ಅವರಲ್ಲಿ 5 ವರ್ಷದೊಳಗಿನ 85,037 ಸಾವಿರ ಮಕ್ಕಳು, 5 ರಿಂದ 18 ವರ್ಷದ 4,39,333 ಲಕ್ಷ ಜನ, 18 ವರ್ಷ ಮೇಲ್ಪಟ್ಟ 14,22,122 ಲಕ್ಷ ಸಾರ್ವಜನಿಕರು ಆಧಾರ್ ಕಾರ್ಡ್ ಪಡೆದಿದ್ದಾರೆ. ರಾಜ್ಯ ಆಧಾರ್ ನೋಂದಣಿ ಪ್ರಾಧಿಕಾರ ಜಿಲ್ಲೆಯ ನಾಡಕಚೇರಿಯ ಜನಸ್ನೇಹಿ ಕೇಂದ್ರಗಳ ಕಚೇರಿಯಲ್ಲಿ ಆಯ್ದ ಬ್ಯಾಂಕ್, ಅಂಚೆ ಕಚೇರಿಗಳಲ್ಲಿ ನೋಂದಣಿ ಕೇಂದ್ರ ತೆರೆದಿದೆ. ಕಚೇರಿ ಸಮಯದಲ್ಲಿ ಆಧಾರ್ ಸೇವೆ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಆಧಾರ್ ನಿಷ್ಕ್ರಿಯಗೊಂಡು ವಿವಿಧ ಸೌಲಭ್ಯ ಅಥವಾ ಸೇವೆ ಪಡೆಯಲು ತೊಂದರೆಯಾಗುತ್ತದೆ. ಅಗತ್ಯ ದಾಖಲೆ ನೀಡಿ ನೋಂದಾಯಿಸಿಕೊಂಡು ಕಡ್ಡಾಯವಾಗಿ ಆಧಾರ್ ಕಾರ್ಡ್ ಪಡೆಯಬೇಕು ಎಂದು ಹೇಳಿದ್ದಾರೆ.
10 ವರ್ಷದ ಹಿಂದೆ ಆಧಾರ್ ನೋಂದಣಿ ಮಾಡಿಸಿದ ಎಲ್ಲರೂ ಗುರುತಿನ ಹಾಗೂ ವಿಳಾಸ ದಾಖಲೆ ನೀಡಿ ಅಧಾರ್ ಕೇಂದ್ರದಲ್ಲಿ ಮರು ಅಪ್ಲೋಡ್ ಮಾಡಿಸಬೇಕು. ಇದನ್ನು ಅನ್‌ಲೈನ್ ಮೂಲಕವೂ ನೇರವಾಗಿ ನವೀಕರಿಸಲು ಅವಕಾಶವಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ್, ಯುಐಡಿಐ ಸಹಾಯಕ ಮ್ಯಾನೇಜರ್ ಡೇವಿಡ್ ಸೀಮನ್ಸೆ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಹಾಗೂ ಅಂಚೆ ಕಛೇರಿಯ ವ್ಯವಸ್ಥಾಪಕರು, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಸೇರಿದಂತೆ ಇತರರು ಇದ್ದರು.