Bidar | ಜನಗಣತಿಯಲ್ಲಿ ಯಾವುದೇ ಮನೆ, ವ್ಯಕ್ತಿ ಬಿಟ್ಟುಹೋಗದಂತೆ ಎಚ್ಚರ ವಹಿಸಿ: ಸುರೇಖಾ

ಬೀದರ್: 2027ರ ಜನಗಣತಿಯಲ್ಲಿ ಯಾವುದೇ ಮನೆ ಅಥವಾ ವ್ಯಕ್ತಿ ಬಿಟ್ಟುಹೋಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಮುಂಬರುವ ಜನಗಣತಿ ಪ್ರಕ್ರಿಯೆಯ ಎರಡನೇ ಹಂತದ ಸಿದ್ಧತೆಗಳು ಹಾಗೂ ಮೇಲ್ವಿಚಾರಣಾ ಮಾರ್ಗಸೂಚಿಗಳ ಕುರಿತು ಈಗಾಗಲೇ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸುರೇಖಾ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಗುರುವಾರ ಭಾರತ ಜನಗಣತಿ-2027ರ ಎರಡನೇ ಹಂತದ ಕಾರ್ಯಾಚರಣೆಗಾಗಿ ಜನಗಣತಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಗಣತಿಯ ಮೊದಲ ಹಂತದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿರುವ ಮನೆಗಳ ಪಟ್ಟಿ ಮಾಡುವಿಕೆಯ ಬ್ಲಾಕ್‌ಗಳನ್ನು ಇದೀಗ ಜನಸಂಖ್ಯೆ ಗಣತಿಯ ಎರಡನೇ ಹಂತಕ್ಕೆ ವರ್ಗಾಯಿಸಲಾಗುವುದು. ಮೊದಲ ಹಂತದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ ಗಣತಿದಾರರು (ಎನ್ಯುಮರೇಟರ್‌ಗಳು) ಮತ್ತು ಮೇಲ್ವಿಚಾರಕರು ತಮ್ಮ ಜವಾಬ್ದಾರಿಗಳನ್ನು ಮುಂದುವರಿಸಲಿದ್ದಾರೆ ಎಂದರು.
ಪ್ರತಿ ಕುಟುಂಬದ ಪ್ರತಿಯೊಬ್ಬ ಸದಸ್ಯರ ಮಾಹಿತಿಯನ್ನು ದಾಖಲಿಸುವುದು ಈ ಹಂತದ ಮುಖ್ಯ ಉದ್ದೇಶವಾಗಿದೆ. ಈ ಬಾರಿಯ ಜನಗಣತಿ ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ನಡೆಯಲಿದ್ದು, ಮೊಬೈಲ್ ಆ್ಯಪ್ ಮತ್ತು ಸಿಎಂಎಸ್ ಪೋರ್ಟಲ್ ಮೂಲಕ ಮೇಲ್ವಿಚಾರಣೆ ಹಾಗೂ ಸ್ವಯಂ ಜನಗಣತಿ ಸೌಲಭ್ಯ ಕಲ್ಪಿಸಲಾಗಿದೆ. ಜನಗಣತಿ ಉಸ್ತುವಾರಿ ಅಧಿಕಾರಿಗಳು ಹಾಗೂ ಮೇಲ್ವಿಚಾರಕರು ಕ್ಷೇತ್ರಮಟ್ಟದಲ್ಲಿ ನಿರಂತರ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.
ನಂತರ ಜನಗಣತಿ-2027ರ ಎರಡನೇ ಹಂತದ ಜಿಲ್ಲಾ ನೋಡಲ್ ಅಧಿಕಾರಿ ಸತ್ಯೇಂದ್ರಕುಮಾರ್ ಅವರು ಜನಗಣತಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಬೀದರ್ ಸಹಾಯಕ ಆಯುಕ್ತ ಅಭಿನವ್ ಜೈನ್, ಬಸವಕಲ್ಯಾಣ ಸಹಾಯಕ ಆಯುಕ್ತ ಪ್ರಕಾಶ್ ಕುದರೆ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸೂರ್ಯಕಾಂತ್ ಬಿರಾದಾರ್ ಹಾಗೂ ಜಿ.ಪಂ. ಸಿಪಿಒ ಕಿಶೋರಕುಮಾರ್ ದುಬೆ ಸೇರಿದಂತೆ ಜನಗಣತಿ ಕಾರ್ಯದಲ್ಲಿ ಪಾಲ್ಗೊಳ್ಳಲಿರುವ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.






