ಬೀದರ್ | ಸಮೀಕ್ಷೆಯ ಧರ್ಮದ ಕಾಲಂನಲ್ಲಿ ʼಹಿಂದುʼ, ಜಾತಿ ಕಾಲಂನಲ್ಲಿ ʼಮಾದಿಗʼ ಎಂದು ನಮೂದಿಸಿ : ಫರ್ನಾಂಡಿಸ್ ಹಿಪ್ಪಳಗಾಂವ್

ಬೀದರ್ : ರಾಜ್ಯ ಸರ್ಕಾರವು ಆರಂಭಿಸಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ “ಹಿಂದು” ಮತ್ತು ಜಾತಿ ಕಾಲಂನಲ್ಲಿ “ಮಾದಿಗ” ಎಂದು ಕಡ್ಡಾಯವಾಗಿ ಬರೆಯಬೇಕು ಎಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ್ ಅವರು ಒತ್ತಾಯಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ನಾವು ಈ ನೆಲದ ಮಕ್ಕಳು, ಬಹುದಿನಗಳ ನಮ್ಮ ಬೇಡಿಕೆಯಾಗಿದ್ದ ಒಳ ಮೀಸಲಾತಿ ಕೊನೆಗೂ ಜಾರಿಯಾಗಿದ್ದು, ಸಂತೋಷದ ವಿಷಯವಾಗಿದೆ. ಈಗ ಮತ್ತೆ ರಾಜ್ಯ ಸರ್ಕಾರ ಸಾಮಾಜಿಕ ಹಾಗೂ ಶೈಕ್ಷಣಿಕ ಸಮಿಕ್ಷೆ ಆರಂಭಿಸಿದೆ. ನಾವು ಆದಿ ಜಾಂಬವ ವಂಶಸ್ತರು. ಹಾಗಾಗಿ ನಮ್ಮ ಪೂರ್ವಜರೆಲ್ಲರೂ ಮೂಲತಃ ಹಿಂದುಗಳಾಗಿದ್ದಾರೆ. ಹಾಗಾಗಿ ನಾವು ಧರ್ಮದ ಕಾಲಂನಲ್ಲಿ ಕಡ್ಡಾಯವಾಗಿ ಹಿಂದು ಎಂದು ಬರೆಸಬೇಕು ಎಂದರು.
ಸಮುದಾಯದ ಹಳ್ಳಿ ಕಡೆಗಳಲ್ಲಿ “ಮಾಂಗ್”, “ಮಾತಂಗ್” ಎಂಬ ಹೆಸರುಗಳು ಬಳಸಲಾಗುತ್ತಿದ್ದರೂ, ಸಮುದಾಯದ ಸದಸ್ಯರು ಕೇವಲ ಜಾತಿ ಕಾಲಂನಲ್ಲಿ ಮಾದಿಗ ಎಂದು ದಾಖಲಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಕಮಲಾಕರ್ ಹೆಗಡೆ, ಯುವ ಘಟಕದ ಜಿಲ್ಲಾಧ್ಯಕ್ಷ ದೇವದಾಸ್ ಹಿಪ್ಪಳಗಾಂವ್, ಪ್ರಮುಖರು ಬಾಲರಾಜ್ ಹಿಪ್ಪಳಗಾಂವ್, ತುಳಸಿರಾಮ್, ಬಸವರಾಜ್ ಮಾಳಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.





