ಬೀದರ್ | ಸಮೀಕ್ಷೆಯಲ್ಲಿ ಜಾತಿ ಕಾಲಂನಲ್ಲಿ ‘ಮಡಿವಾಳ’ ಎಂದೇ ನಮೂದಿಸಿ : ಸಿ.ನಂಜಪ್ಪ

ಬೀದರ್ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ 2025ರ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವೇಳೆ, ಜಾತಿ ಕಾಲಂ (ಕಾಲಂ 9)ನಲ್ಲಿ ‘ಮಡಿವಾಳ’ ಎಂದು ಮಾತ್ರ ನಮೂದಿಸಬೇಕು ಎಂದು ಮಡಿವಾಳ ಸಮಾಜದ ರಾಜ್ಯಾಧ್ಯಕ್ಷ ಸಿ.ನಂಜಪ್ಪ ಕರೆ ನೀಡಿದ್ದಾರೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಮಡಿವಾಳ ಸಮಾಜವನ್ನು ಅಗಸ, ಪರಿಟ, ಚಾಕಲ, ದೋಬಿ, ರಜಕ ಮುಂತಾದ ಹೆಸರಿನಿಂದ ಗುರುತಿಸಲಾಗುತ್ತದೆಯಾದರೂ, ಈ ಎಲ್ಲಾ ಪರ್ಯಾಯ ಪದಗಳನ್ನು ಬಿಟ್ಟು ಕೇವಲ ಮಡಿವಾಳ ಎಂದು ಮಾತ್ರ ದಾಖಲಿಸುವಂತೆ ಸಮಾಜದ ಕುಲಬಾಂಧವರಿಗೆ ಸೂಚಿಸಿದರು.
ರಾಜ್ಯದಲ್ಲಿ ಸುಮಾರು 13 ಲಕ್ಷ ಜನಸಂಖ್ಯೆ ಹೊಂದಿರುವ ನಮ್ಮ ಸಮಾಜದ ವಿವರವನ್ನು ಹಿಂದಿನ ಕಾಂತರಾಜ್ ಆಯೋಗದ ಸಮೀಕ್ಷೆಯಲ್ಲಿ ಕೇವಲ 6.20 ಲಕ್ಷ ಎಂದು ತೋರಿಸಲಾಗಿತ್ತು. ಇದನ್ನು ಸರಿಪಡಿಸಲು ಹಾಗೂ ನಿಖರ ಅಂಕಿಅಂಶಗಳನ್ನು ಪಡೆಯಲು ಸರ್ಕಾರ ಈಗ ಮತ್ತೆ ಸಮೀಕ್ಷೆ ನಡೆಸುತ್ತಿದೆ. ಸಮಾಜದ ಪ್ರತಿಯೊಬ್ಬ ಸದಸ್ಯರು ಸರಿಯಾದ ಹೆಸರು ಬಳಸಿ, ಇತರರಿಗೂ ಅರಿವು ಮೂಡಿಸಬೇಕಾಗಿದೆ ಎಂದು ಅವರು ಹೇಳಿದರು.
ಶಿವಮೊಗ್ಗ ಜಿಲ್ಲೆಯಲ್ಲೇ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದು, ಸೊರಬ ತಾಲೂಕಿನಲ್ಲಿಯೇ 28 ಸಾವಿರ ಮಂದಿ ಇದ್ದಾರೆ. ಜಿಲ್ಲೆಯ ಒಟ್ಟು ಜನಸಂಖ್ಯೆ 35 ಸಾವಿರಕ್ಕಿಂತ ಹೆಚ್ಚು ಆಗಿದೆ ಎಂದು ನಂಜಪ್ಪ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್. ಪ್ರಕಾಶ್, ರಾಜ್ಯ ಕಾರ್ಯಾಧ್ಯಕ್ಷ ಡಿಗಂಬರ್ ಮಡಿವಾಳ್, ಜಿಲ್ಲಾಧ್ಯಕ್ಷ ಸುಭಾಷ್ ಮಡಿವಾಳ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕಂದಗೊಳ್, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್ ಕಪಲಾಪುರೆ, ಪ್ರಮುಖರಾದ ನಾಗರಾಜ್ ಮಡಿವಾಳ್ ಹಾಗೂ ಧನರಾಜ್ ಮಡಿವಾಳ್ ಉಪಸ್ಥಿತರಿದ್ದರು.







