ಬೀದರ್| ಪರಿಸರ ಪ್ರಜ್ಞೆ ಈ ಕಾಲದ ಅಗತ್ಯ : ಪ್ರೊ. ಸಿ. ಬಿ. ಪರತಾಪುರೆ

ಬೀದರ್ : ಕೃಷಿ ಮತ್ತು ಪರಿಸರವು ಸಾಹಿತ್ಯ ಕೃಷಿಯಲ್ಲಿ ಹೆಚ್ಚು ಬರಬೇಕು. ಪರಿಸರ ಅಧ್ಯಯನ ಓದಿನ ಭಾಗವಾಗಬೇಕು. ಪರಿಸರ ಪ್ರಜ್ಞೆ ಈ ಕಾಲದ ಅಗತ್ಯವಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ ಸಿ. ಬಿ. ಪರತಾಪುರೆ ಅವರು ಹೇಳಿದರು.
ಬಸವಕಲ್ಯಾಣ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರವಿವಾರ ನಡೆದ ಬಸವಕಲ್ಯಾಣ ರೀಡರ್ಸ್ ಕ್ಲಬ್ ಉದ್ಘಾಟಿಸಿ ಮಾತನಾಡಿದ ಅವರು, ನಾಶವಾಗುತ್ತಿರುವ ಮಣ್ಣಿನ ಸತ್ವ ಉಳಿಸುವ ಸವಾಲು ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ ಎಂದರು.
ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ಪರಿಸರ ಇತ್ಯಾದಿ ಪ್ರಕಾರದ ಕೃತಿಗಳನ್ನು ಓದುವುದರಿಂದ ಜ್ಞಾನ ಸಂಪತ್ತು ಹೆಚ್ಚಾಗುತ್ತದೆ. ನಿರಂತರ ಅಧ್ಯಯನ ವ್ಯಕ್ತಿಯ ಬೆಳವಣಿಗೆಗೆ ಪೂರಕವಾಗಿದೆ ಎಂದು ಹೇಳಿದರು.
ಉಪನ್ಯಾಸಕ ಡಾ. ಭೀಮಾಶಂಕರ ಬಿರಾದಾರ್ ಅವರು ಮಾತನಾಡಿ, ಗಂಭೀರವಾದ ಓದು ಬಿಡುಗಡೆಯ ದಾರಿಯಾಗಿದೆ. ನಮಗೆ ಹಲವು ನಂಬಿಕೆಗಳಿಂದ, ಅನೇಕ ಆವರಣಗಳಿಂದ ಬಿಡುಗಡೆಗೊಳಿಸಿ ಮುಕ್ತವಾದ, ಸ್ವತಂತ್ರವಾದ ನಿಲುವುಗಳು ಮೂಡಿಸುತ್ತದೆ. ಲೋಕದ ಗ್ರಹಿಕೆಗೆ, ಸ್ವವಿಮರ್ಶೆ, ಅನುಭವದ ವಿಸ್ತಾರಕ್ಕೆ, ಅರಿವು ಹೆಚ್ಚಿಸಿಕೊಳ್ಳಲು ಓದಿನ ಪ್ರಕ್ರಿಯೆಯಿಂದ ಮಾತ್ರ ಸಾಧ್ಯ ಎಂದರು.
ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ. ಹುಡೇದ್ ಮಾತನಾಡಿ, ವಚನ ಸಾಹಿತ್ಯ ಸೇರಿ ಯಾವುದೇ ಬಗೆಯ ಓದು ನಮ್ಮಲ್ಲಿ ವೈಚಾರಿಕ ಚಿಂತನೆ ಬೆಳೆಸಬೇಕು. ತಂತ್ರಜ್ಞಾನದ ಬಳಕೆ ಹೆಚ್ಚಾದಂತೆ ಈ ಕಾಲದ ವಿದ್ಯಾರ್ಥಿಗಳು ಓದಿನಿಂದ ವಿಮುಖವಾಗುತ್ತಿರುವುದು ದುರಂತವಾಗಿದೆ. ಹೆಚ್ಚು ಮೌಲಿಕ ಕೃತಿಗಳನ್ನು ಓದುವುದರಿಂದ ಮಾನವೀಯ ಮೌಲ್ಯಗಳು ಬೆಳೆಯುತ್ತವೆ ಎಂದು ತಿಳಿಸಿದರು.
ಈ ವೇಳೆ ನಿವೃತ್ತ ಶಿಕ್ಷಕ ಭೀಮಾಶಂಕರ್ ಮಾಶಾಳಕರ್ ಹಾಗೂ ಡಾ. ಶ್ರೀಕಾಂತ್ ಚೌವ್ಹಾಣ್ ಮಾತನಾಡಿದರು.
ಈ ಸಂದರ್ಭದಲ್ಲಿ ಡಾ. ಶಿವಾಜಿ ಮೇತ್ರೆ, ಡಾ. ಪ್ರವೀಣಕುಮಾರ್ ಕಮಠಾಣೆ, ಶರಣು ಗವಳಿ, ಉದ್ಧವರಾವ್ ಉಪಾಸೆ, ಭೀಮಾಶಂಕರ್ ಪೂಜಾರಿ, ಮಾರುತಿ ಕಾಳೆ, ಭೂಮಿಕಾ, ದತ್ತಾತ್ರೇಯ ಪವಾರ್ ಹಾಗೂ ಸಚಿನ್ ಸೇರಿದಂತೆ ಇತರರು ಇದ್ದರು. ಚಂದ್ರಕಾಂತ್ ಅಕ್ಕಣ್ಣಾ ನಿರೂಪಿಸಿದರು. ಬಸವರಾಜ್ ಶೇರಿ ಸ್ವಾಗತಿಸಿದರು. ಡಾ. ಚಿತ್ರಶೇಖರ್ ಚಿರಳ್ಳಿ ವಂದಿಸಿದರು.






