ಬೀದರ್ | ಪ್ರತಿಯೊಬ್ಬ ಪ್ರಜೆಯೂ ಮತದಾನದ ಮಹತ್ವವನ್ನು ಅರಿತುಕೊಳ್ಳಬೇಕು : ನ್ಯಾ.ಅಭಿನಯ್

ಬೀದರ್ : ಪ್ರತಿಯೊಬ್ಬ ಪ್ರಜೆಯೂ ಮತದಾನದ ಮಹತ್ವವನ್ನು ಅರಿತುಕೊಳ್ಳಬೇಕು. ಫಲಾ ಅಪೇಕ್ಷೆ ಇಲ್ಲದೆ ಮತದಾನ ಮಾಡುವುದು ಒಂದು ಶ್ರೇಷ್ಠವಾದ ಕಾರ್ಯವಾಗಿದ್ದು, ಪ್ರತಿಯೊಬ್ಬರು ಮತದಾನ ಮಾಡುವುದರ ಜೊತೆಗೆ ಎಲ್ಲರಿಗೂ ಮತದಾನದ ಜಾಗೃತಿಯನ್ನು ಮೂಡಿಸಬೇಕು ಎಂದು ನ್ಯಾ.ಅಭಿನಯ್ ಅಭಿಪ್ರಾಯಪಟ್ಟರು.
ಇಂದು ಔರಾದ್ ಪಟ್ಟಣದ ಡಿಪ್ಲೊಮಾ ಕಾಲೇಜಿನಲ್ಲಿ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಆಡಳಿತ ಹಾಗೂ ನ್ಯಾಯವಾದಿಗಳ ಸಂಘದಿಂದ ಆಯೋಜಿಸಲಾಗಿದ್ದ ʼರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮʼ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಹಾಗೂ ಮತದಾರರಿಗೆ ಅತ್ಯಂತ ಗೌರವ ಸ್ಥಾನವನ್ನು ನೀಡಲಾಗಿದೆ. ದಾನದಲ್ಲಿಯೇ ಶ್ರೇಷ್ಠವಾದ ದಾನ ಮತದಾನವಾಗಿದ್ದು, ಇದು ಪವಿತ್ರವಾದ ಕಾರ್ಯವಾಗಿದೆ ಎಂದು ತಿಳಿಸಿದರು.
ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ಹಾಗೂ ಅತ್ಯುತ್ತಮ ಸಂವಿಧಾನ ಹೊಂದಿದ ದೇಶ ನಮ್ಮದಾಗಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ತಮ್ಮ ಮತದಾನದ ಹಕ್ಕು ಪಡೆಯಲು ಹೆಸರು ನೋಂದಣಿ ಮಾಡಿಕೊಳ್ಳಬೇಕು. ಭವ್ಯ ಭಾರತದ ನಿರ್ಮಾಣಕ್ಕಾಗಿ ಮತದಾನವೇ ಪರಮೋಚ್ಛ ಶಕ್ತಿಯಾಗಿದೆ. ಆದ್ದರಿಂದ ಯಾರೂ ಮತದಾನದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ನೋಂದಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಲ್ಲಶೆಟ್ಟಿ ಚಿದ್ರೆ, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ, ನ್ಯಾಯವಾದಿ ಸಂಘದ ಅಧ್ಯಕ್ಷ ಸಂದೀಪ್ ಮೇತ್ರೆ, ನ್ಯಾ.ರಾಜಕುಮಾರ್ ಮೀತ್ರಾ ಹಾಗೂ ಪ್ರಾಂಶುಪಾಲ ವಿಜಯಶೆಟ್ಟಿ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.







