ಬೀದರ್ | ಪ್ರೊ.ಬಿ.ಕೃಷ್ಣಪ್ಪ ಅವರ ಹೋರಾಟದ ಮನೋಭಾವನೆ ಎಲ್ಲರೂ ಅಳವಡಿಸಿಕೊಳ್ಳಬೇಕು : ಸಂಜುಕುಮಾರ್ ಮೇತ್ರೆ

ಬೀದರ್ : ದಲಿತರ ಪರ ಹೋರಾಡಿ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟ ಪ್ರೊ.ಬಿ.ಕೃಷ್ಣಪ್ಪ ಅವರ ಹೋರಾಟದ ಮನೋಭಾವನೆ ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಭೀಮವಾದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸಂಜುಕುಮಾರ್ ಮೇತ್ರೆ ಅವರು ಹೇಳಿದರು.
ಇಂದು ನಗರದ ಚಾಲುಕ್ಯ ಹೋಟೆಲ್‌ನಲ್ಲಿ ಭೀಮವಾದ ದಲಿತ ಸಂಘರ್ಷ ಸಮಿತಿ ವತಿಯಿಂದ ದಲಿತ ಚಳುವಳಿಯ ಪಿತಾಮಹ ಪ್ರೊ.ಬಿ.ಕೃಷ್ಣಪ್ಪ ಅವರ 87ನೇ ಜಯಂತ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರೊ.ಬಿ.ಕೃಷ್ಣಪ್ಪ ಅವರು ದಲಿತರ ಸಮುದಾಯಗಳ ಮೇಲೆ ನಡೆಯುತ್ತಿರುವ ಶೋಷಣೆ, ಹಿಂಸೆ ಹಾಗೂ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಿದ್ದರು. ತಮ್ಮ ತನು, ಮನ, ಧನವನ್ನು ಧಾರೆ ಎರೆದು ದಲಿತ ಸಮುದಾಯ ಹಾಗೂ ಶೋಷಣೆಗೆ ಒಳಗಾದ ಎಲ್ಲಾ ಸಮುದಾಯವನ್ನು ಒಗ್ಗೂಡಿಸಿ ಅವರ ಏಳಿಗೆಗೆ ದುಡಿದ ಮಹಾನ್ ವ್ಯಕ್ತಿಯಾಗಿದ್ದರು. ರಾಜ್ಯದಲ್ಲಿ ದಲಿತ ಚಳವಳಿಯನ್ನು ಹುಟ್ಟುಹಾಕಿದ ಮಹಾನ್ ನಾಯಕ ಎಂದರೆ ಪ್ರೊ.ಬಿ.ಕೃಷ್ಣಪ್ಪ ಅವರಾಗಿದ್ದರು. ನಾವೆಲ್ಲರೂ ಅವರ ಹೋರಾಟದ ದಾರಿಯಲ್ಲಿ ಸಾಗಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಓಂಕಾರ್ ಮಾಸ್ಟರ್, ದಲಿತ ಮುಖಂಡ ಶ್ರೀಮಂತ್ ಸೂರ್ಯವಂಶಿ, ತುಕಾರಾಮ್ ಹಸನ್ಮುಖ, ಘಾಳೆಪ್ಪ ಶೆಂಬೆಳ್ಳಿ, ದಸರಥ್ ದೊಡ್ಮನಿ, ತಾಜೋದ್ದಿನ್ ಮತ್ತು ದಲಿತ ಯೂನಿಟಿ ರಾಜ್ಯಾಧ್ಯಕ್ಷ ಪ್ರಕಾಶ್ ರಾವಣ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.