ಬೀದರ್ | ಪಂಡರಗೇರಾ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟಿದ ಅಬಕಾರಿ ಪೊಲೀಸರು

ಬೀದರ್ : ಹುಮನಾಬಾದ್ ಮತಕ್ಷೇತ್ರ ಮತ್ತು ಬಸವಕಲ್ಯಾಣ ತಾಲೂಕಿನ ಪಂಡರಗೇರಾ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನು ಅಬಕಾರಿ ಇಲಾಖೆಯ ಪೊಲೀಸರು ತಡೆಗಟ್ಟಿದ್ದಾರೆ.
ಪಂಡರಗೇರಾ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಹಾವಳಿ ಹೆಚ್ಚಾಗಿದೆ. ಊರಲ್ಲಿನ ಕೆಲ ಪಾನ್ ಶಾಪ್ ಮತ್ತು ಇತರ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಇದರಿಂದಾಗಿ ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗುತ್ತಿದೆ. ಹೆಣ್ಣುಮಕ್ಕಳು ಮತ್ತು ಸಾರ್ವಜನಿಕರು ಓಡಾಡುವ ರಸ್ತೆಯ ಪಕ್ಕದಲ್ಲಿಯೇ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಇದರಿಂದಾಗಿ ಎಲ್ಲರಿಗೂ ಕಿರಿಕಿರಿ ಉಂಟಾಗುತ್ತಿದೆ. ತಕ್ಷಣವೇ ಗ್ರಾಮದಲ್ಲಿನ ಮದ್ಯ ಮಾರಾಟವನ್ನು ತಡೆಗಟ್ಟಬೇಕು ಎಂದು ಮಂಗಳವಾರ ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದ್ದರು.
ಇದರ ಪರಿಣಾಮವಾಗಿ ಇಂದು ಗ್ರಾಮಕ್ಕೆ ಅಬಕಾರಿ ಪೊಲೀಸರು ಆಗಮಿಸಿ ಗ್ರಾಮದಲ್ಲಿನ ಅಕ್ರಮ ಮದ್ಯ ಮಾರಾಟವನ್ನು ತಡೆದಿದ್ದಾರೆ. ಹಾಗೆಯೇ ಮುಂದಿನ ದಿನಗಳಲ್ಲಿಯೂ ಕೂಡ ಅಕ್ರಮ ಮದ್ಯ ಮಾರಾಟ ಮಾಡಕೂಡದು ಎಂದು ಗ್ರಾಮದಲ್ಲಿ ಡಂಗುರ ಸಾರಿ ತಿಳಿಸಲಾಗಿದೆ. ಇದರಿಂದಾಗಿ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.





