ಬೀದರ್ | ಬೆಳೆ ಪರಿಹಾರ ಹಣ ಜಮೆಗೊಳಿಸಲು ರೈತರಿಂದ ಮನವಿ

ಬೀದರ್ : ಜಿಲ್ಲೆಯಲ್ಲಿ ಮುಂಗಾರಿನ ಹಂಗಾಮು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಬೆಳೆಹಾನಿ ಪರಿಹಾರ ಸಮರ್ಪಕ ವಿತರಣೆ ಆಗುತ್ತಿಲ್ಲ. ಬೆಳೆ ಪರಿಹಾರ ಹಣ ಸಮರ್ಪಕವಾಗಿ ಜಮೆಗೊಳಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ಮಂಗಳವಾರ ಬಸವಕಲ್ಯಾಣದ ತಹಶೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಹುಮನಾಬಾದ್, ಬಸವಕಲ್ಯಾಣ, ಹುಲಸೂರ ತಾಲೂಕಿನ ರೈತರ ಖಾತೆಗೆ ಬೆಳೆ ಪರಿಹಾರ ಹಣ ಜಮೆ ಆಗಿಲ್ಲ. ಈ ಬಗ್ಗೆ ಅನೇಕ ರೈತರು ತಿಳಿಸಿದ್ದು, ಜಿಲ್ಲಾಡಳಿತವು ಈ ಕುರಿತು ಮುತುವರ್ಜಿ ವಹಿಸಿ ಸಂತ್ರಸ್ತರ ಖಾತೆಗೆ ಪರಿಹಾರ ಹಣ ಜಮೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಮುಂಗಾರಿನ ಬೆಳೆ ರೈತರಿಗೆ ಸಂಪೂರ್ಣ ಕೈಕೊಟ್ಟ ಕಾರಣ ಕೇಂದ್ರ ಸರಕಾರದ ರಾಷ್ಟ್ರೀಯ ವಿಪತ್ತು ಪ್ರಕ್ರಿಯೆ ನಿಧಿ ಈಗಾಗಲೇ 8,500 ರೂ.ಗಳು ರಾಜ್ಯ ಸರಕಾರಕ್ಕೆ ಜಮಾವಣೆಗೊಂಡಿದ್ದು, ಅದರ ಜೊತೆಗೆ ರಾಜ್ಯ ವಿಪತ್ತು ಪ್ರಕ್ರಿಯೆ ನಿಧಿಯ ಹಣವಾದ 8,500 ರೂ. ಸೇರಿಸಿ ಕೊಡುತ್ತೇವೆಂದು ಹೇಳಿದ್ದರು. ಆದರೆ ಇಲ್ಲಿಯವರೆಗೆ ಜಮಾವಣೆಗೊಂಡಿಲ್ಲ. ಅತೀ ಶೀಘ್ರದಲ್ಲಿ ರೈತರ ಖಾತೆಗೆ ಹಣ ಜಮಾವಣೆ ಮಾಡಬೇಕು ಎಂದು ಆಗ್ರಹಿಸಲಾಗಿದೆ.
ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ರೈತ ಮುಖಂಡ ವೀರಾರೆಡ್ಡಿ ಪಾಟೀಲ್, ಬೀದರ್ ಹಾಗೂ ಭಾಲ್ಕಿ ತಾಲೂಕಿನ ರೈತರಿಗೆ ಬೆಳೆ ಪರಿಹಾರದ ಹಣ ಜಮಾವಣೆಯಾಗಿದೆ ಎಂದು ಕೇಳಲ್ಪಟ್ಟಿದ್ದೇವೆ. ಆದರೆ ಬಸವಕಲ್ಯಾಣ ಹಾಗೂ ಹುಮನಾಬಾದ ತಾಲೂಕಿನ ರೈತರಿಗೆ ಇನ್ನು ಕೂಡ ನಯಾ ಪೈಸೆ ಕೂಡ ಬೆಳೆ ಪರಿಹಾರ ಹಣ ಜಮೆಯಾಗಲಿಲ್ಲ. ಎಲ್ಲ ರೈತರ ಖಾತೆಗೆ ಹಣ ಜಮೆ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ್ದರು. ಆದರೆ, ನಮ್ಮ ತಾಲೂಕಿನ ರೈತರಿಗೆ ಇನ್ನು ಕೂಡ ಪರಿಹಾರ ಹಣ ಜಮೆಯಾಗಲಿಲ್ಲ. ಆದಷ್ಟು ಬೇಗ ಬೆಳೆ ಪರಿಹಾರ ಹಣ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಸಂತೋಷಕುಮಾರ್ ಗುದಗೆ, ರುದ್ರಯ್ಯ ಸ್ವಾಮಿ, ಕಾಶೀನಾಥ್ ಬಿರಾದಾರ್, ಬಾಬು ಗೌರ್, ಹಣಮಂತ್ ಯಳವಂತಗಿ, ರಾಜಕುಮಾರ್ ಹೊಳ್ಳೆ ಹಾಗೂ ಕಲ್ಲಪ್ಪ ಗೌದೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.







