ಬೀದರ್ | ಜಿಲ್ಲಾಧಿಕಾರಿಯವರ ಆಶ್ವಾಸನೆಯಂತೆ ರೈತರ ಖಾತೆಗೆ ಕಬ್ಬಿನ ಹಣ ಜಮೆ ಮಾಡುವಂತೆ ರೈತರಿಂದ ಮನವಿ

ಬೀದರ್ : ಇತ್ತೀಚಿಗೆ ಜಿಲ್ಲಾಧಿಕಾರಿಗಳು ಪ್ರತಿ ಟನ್ ಕಬ್ಬಿಗೆ 2,700 ರೂ. ನೀಡುವುದಾಗಿ ಆಶ್ವಾಸನೆ ನೀಡಿದ್ದರು. ಅದರಂತೆಯೇ ರೈತರ ಖಾತೆಗೆ ಕಬ್ಬಿನ ಹಣ ಜಮೆ ಮಾಡುವಂತೆ ರೈತರು ಮನವಿ ಮಾಡಿದ್ದಾರೆ.
ಇಂದು ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಪತ್ರದಲ್ಲಿ, ಸಕ್ಕರೆ ಕಾರ್ಖಾನೆಗಳಿಗೆ ರೈತರು ಸರಬರಾಜು ಮಾಡಿರುವ ಕಬ್ಬಿನ ಬಿಲ್ಲು ಪಾವತಿ ಮಾಡದ ಕಾರಣ ಎ.19 ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡುವುದಾಗಿ ರೈತ ಸಂಘದ ವತಿಯಿಂದ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಜಿಲ್ಲಾಧಿಕಾರಿಗಳು ಮೇ ತಿಂಗಳಿನ ಮೊದಲನೇ ವಾರದಲ್ಲಿ ಕಾರ್ಖಾನೆಗೆ ಸರಬರಾಜು ಮಾಡಿರುವ ಎಲ್ಲಾ ರೈತರ ಕಬ್ಬಿನ ಬಿಲ್ಲು ಪಾವತಿ ಮಾಡಲಾಗುವುದು ಎಂದು ತಾವು ಆಶ್ವಾಸನೆ ನೀಡಿದ್ದಕ್ಕಾಗಿ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗಿತ್ತು. ಮೇ ತಿಂಗಳ ಎರಡನೇ ವಾರ ಮುಗಿಯುತ್ತಾ ಬಂದರೂ ಕೂಡ ರೈತರ ಹಣ ಜಮೆ ಮಾಡದೇ, ಜಿಲ್ಲಾಧಿಕಾರಿ ತಾವು ಕೊಟ್ಟ ಆಶ್ವಾಸನೆ ಉಳಿಸಿಕೊಳ್ಳಲಿಲ್ಲ ಎಂದು ಆಕ್ರೋಶ ಹೊರಹಾಕಲಾಗಿದೆ.
ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿರುವ ಎಲ್ಲಾ ರೈತರ ಖಾತೆಗೆ ಪ್ರತಿ ಟನ್ ಕಬ್ಬಿಗೆ 2,700 ರೂ. ಮೇ ತಿಂಗಳು ಮುಗಿಯುವವರೆಗೆ ಜಮೆ ಮಾಡಬೇಕು. ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ತಮ್ಮನ್ನು ಘೆರಾವ್ ಹಾಕಿ ಪ್ರತಿಭಟನೆ ಮಾಡಲಾಗುವುದು. ಮುಂದಾಗುವ ಯಾವುದೇ ಅಹಿತಕರ ಘಟನೆಗಳಿಗೆ ತಾವೇ ಜವಾಬ್ದಾರರಾಗುತ್ತೀರಿ ಎಂದು ಜಿಲ್ಲಾಧಿಕಾರಿಗಳಿಗೆ ರೈತರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಿದ್ರಾಮಪ್ಪಾ, ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ್ ಬಿರಾದಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ್ ಸ್ವಾಮಿ ಸಿರ್ಸಿ, ರಾಜಕುಮಾರ್ ಪಾಟೀಲ್, ಬಾಬುರಾವ್ ಜೋಳದಾಬಕಾ, ಚಂದ್ರಶೇಖರ್ ಜಮಖಂಡಿ, ನೀಲಕಂಠ್ ಬುಯ್ಯಾ, ವಿಶ್ವನಾಥ್ ಧರಣೆ ಹಾಗೂ ಶಿವರಾಜ್ ಡೊಂಗರಗಾಂವ್ ಸೇರಿದಂತೆ ಇತರರು ಉಪಸ್ಥಿತರಿದ್ದರು.







