Bidar | ಪ್ರತಿ ಟನ್ ಕಬ್ಬಿಗೆ 5,500 ರೂ. ಬೆಲೆ ನಿಗದಿಗೆ ಆಗ್ರಹಿಸಿ ರೈತ ಸಂಘಗಳ ಸಮನ್ವಯ ಸಮಿತಿಯಿಂದ ಧರಣಿ
5 ದಿನಗಳಲ್ಲಿ ಮುಂಗಡ 4 ಸಾವಿರ ರೂ. ಘೋಷಿಸದಿದ್ದರೆ ರಸ್ತೆ ತಡೆ ಎಚ್ಚರಿಕೆ

ಬೀದರ್ : 2026ನೇ ಸಾಲಿನ ಕಬ್ಬು ಹಂಗಾಮಿಗೆ ಪ್ರತಿ ಟನ್ ಕಬ್ಬಿಗೆ 5,500 ರೂ. ಬೆಲೆ ನಿಗದಿಪಡಿಸಬೇಕು ಹಾಗೂ ಮುಂಗಡವಾಗಿ 4,000 ರೂ. ಪಾವತಿಸಬೇಕು ಎಂದು ಆಗ್ರಹಿಸಿ ರೈತ ಸಂಘಗಳ ಸಮನ್ವಯ ಸಮಿತಿ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಭಗತ್ಸಿಂಗ್ ವೃತ್ತ, ಬಸವೇಶ್ವರ ವೃತ್ತ ಹಾಗೂ ಶಿವಾಜಿ ವೃತ್ತದ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ತಲುಪಿತು. ಬಳಿಕ ರೈತರು ಅಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವುದು ಹಾಗೂ ರೈತರ ಹಕ್ಕುಗಳನ್ನು ರಕ್ಷಿಸುವಂತೆ ಒತ್ತಾಯಿಸಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿಯಂತೆ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವ ಕುರಿತು ಸಂಸತ್ತಿನಲ್ಲಿ ಕಾಯ್ದೆ ರೂಪಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.
ಪ್ರತಿ ಟನ್ ಕಬ್ಬಿಗೆ 5,500 ರೂ. ದರ ನಿಗದಿಪಡಿಸಬೇಕು. ಪ್ರತಿ ಟನ್ಗೆ 4,000 ರೂ. ಮುಂಗಡ ಹಣ ಪಾವತಿಸಬೇಕು ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಏಕರೂಪದ ಕಬ್ಬಿನ ಬೆಲೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ನಿಗದಿಪಡಿಸಿರುವ ಪ್ರತಿ ಟನ್ ಕಬ್ಬಿಗೆ 3,650 ರೂ. ನ್ಯಾಯಯುತ ಮತ್ತು ವೈಜ್ಞಾನಿಕ ಬೆಲೆಯಲ್ಲ ಎಂದು ರೈತರು ಆಕ್ಷೇಪ ವ್ಯಕ್ತಪಡಿಸಿದರು. ರೈತರಿಗೆ ನ್ಯಾಯಯುತ ಬೆಲೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಪಡಿಸುವ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಸಂಘಟನೆಗಳ ನಡುವೆ ಕಬ್ಬಿನ ಬೆಲೆ ನಿಗದಿ ಕುರಿತು ಒಮ್ಮತ ಮೂಡದ ಹಿನ್ನೆಲೆಯಲ್ಲಿ ಸರ್ಕಾರ ಮಧ್ಯಪ್ರವೇಶಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಧರಣಿ ಆರಂಭವಾದ ಐದು ದಿನಗಳೊಳಗಾಗಿ ಪ್ರತಿ ಟನ್ ಕಬ್ಬಿಗೆ 4,000 ರೂ. ಮುಂಗಡ ಹಣ ಪಾವತಿಸುವುದಾಗಿ ಘೋಷಿಸಬೇಕು. ಇಲ್ಲದಿದ್ದರೆ ಬೀದರ್ ಜಿಲ್ಲೆಯಾದ್ಯಂತ ರಸ್ತೆ ತಡೆ ಚಳವಳಿ ನಡೆಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.
ಹೋರಾಟದಲ್ಲಿ ರೈತ ಮುಖಂಡರಾದ ಮಲ್ಲಿಕಾರ್ಜುನ್ ಸ್ವಾಮಿ, ಸುಧಾಕರ್ ನಿರ್ಣಾ, ಮಲ್ಲಾರೆಡ್ಡಿ ಮುರಾಳ್, ಬಸವರಾಜ್ ಸ್ವಾಮಿ, ಬಾಬುರಾವ್ ಹೊನ್ನಾ, ಗುಂಡುರೆಡ್ಡಿ, ಧೂಳಪ್ಪ ಆಣದೂರ್, ಮಲ್ಲಿಕಾರ್ಜುನ್ ಬಿರಾದಾರ್, ಹುಲೆಪ್ಪ ಹುಣಜಿ, ಅಶೋಕ್ ಕಾರಭಾರಿ, ಪಂಡರಿ ಮೇತ್ರೆ, ಸುಕೇಶ್ ರೆಡ್ಡಿ, ಜೈರಾಜ್ ಕೊಳ್ಳಾ, ಕಿರಣ್ ಖಂಡ್ರೆ, ಕೆ.ಡಿ. ಗಣೇಶ್, ಖಾಸಿಂ ಅಲಿ, ಸುಭಾಷ್ ಮಾಶೆಟ್ಟಿ, ಓಂಪ್ರಕಾಶ್ ರೊಟ್ಟೆ, ಶಿವಾಜಿ ಮೇತ್ರೆ, ಕೊಂಡಿಬಾ ಪಾಂಡ್ರೆ, ಶಿವರಾಜ್ ಪಾಟೀಲ್, ಶಿವರಾಯ ಮುಧಾಳೆ, ಶಕುಂತಲಾ, ಮಕಬುಲ್ ಸಾಬ್, ಬಸವರಾಜ್ ಅಷ್ಟೂರೆ, ವಿಠಲರಾವ್ ಮೇತ್ರೆ, ಅಣ್ಣೆಪ್ಪಾ ಶಶಿ, ಶಂಕರ್ ಪಾಟೀಲ್ ಅತಿವಾಳ, ವಿರೇಂದ್ರ ಪಾಟೀಲ್, ವೀರಶೇಟ್ಟಿ ಕಾಳೆ, ಘಾಳೆಪ್ಪಾ ಬೊಂಡೆ ಹಾಗೂ ಸಂತೋಷಕುಮಾರ್ ಗುದಗೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.






