Bidar | ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಎಂಎಸ್‌ಪಿ ಜಾರಿಗೆ ಆಗ್ರಹಿಸಿ ರೈತರಿಂದ ಪ್ರತಿಭಟನೆ

ಬೀದರ್: ರೈತರು ಬೆಳೆಯುವ ಎಲ್ಲ ಬೆಳೆಗಳಿಗೆ ಡಾ. ಎಂ.ಎಸ್.ಸ್ವಾಮಿನಾಥನ್ ಆಯೋಗದ ಶಿಫಾರಸಿನ ಆಧಾರದ ಮೇಲೆ ಕಾನೂನುಬದ್ಧ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಾರ್ಮಿಕ ಸಂಘಗಳ ಒಕ್ಕೂಟದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೈಕ್ ರ‍್ಯಾಲಿ ನಡೆಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ, ಕೇಂದ್ರ ಸಹಕಾರ ಸಚಿವರು ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ, ರೈತರ ಹೋರಾಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು 2020ರಲ್ಲಿ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದರೂ, ರಾಜ್ಯದಲ್ಲಿ ಕೃಷಿ ಸಂಬಂಧಿತ ಕಾಯ್ದೆಗಳಲ್ಲಿ ತಿದ್ದುಪಡಿ ಮಾಡುವ ಮೂಲಕ ಕೃಷಿ ಕ್ಷೇತ್ರಕ್ಕೆ ಕಾರ್ಪೊರೇಟ್ ಕಂಪನಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ವಿದ್ಯುತ್ ಉತ್ಪಾದನೆ ಸೇರಿದಂತೆ ವಿವಿಧ ಯೋಜನೆಗಳ ಹೆಸರಿನಲ್ಲಿ ಕೃಷಿ ಭೂಮಿಗಳನ್ನು ಖರೀದಿಸಲಾಗುತ್ತಿದ್ದು, ಇದರಿಂದ ರೈತರು ಕೃಷಿ ಚಟುವಟಿಕೆಗಳಿಂದ ಹೊರಗುಳಿಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ದೂರಲಾಗಿದೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ರೈತರ ಎಲ್ಲಾ ರೀತಿಯ ಸಾಲಗಳನ್ನು ಮನ್ನಾ ಮಾಡಬೇಕು. ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ಹಾಗೂ ಕೃಷಿ ಕಾರ್ಮಿಕರ ಪ್ರತಿ ಕುಟುಂಬಕ್ಕೆ 50 ಸಾವಿರ ರೂ. ಸಹಾಯಧನ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಅತೀ ಬಡವರು ಮತ್ತು ನಿರ್ಗತಿಕರಿಗೆ ಗ್ರಾಮ ಮಟ್ಟದಲ್ಲಿ ಗಂಜಿ ಕೇಂದ್ರಗಳನ್ನು ಆರಂಭಿಸಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸೇರಿದಂತೆ ಗ್ರಾಮೀಣ ಉದ್ಯೋಗ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಗ್ರಾಮೀಣ ರಸ್ತೆಗಳು, ಹೊಲಗಳಿಗೆ ತೆರಳುವ ದಾರಿಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಸಣ್ಣ ನೀರಾವರಿ ಕೆರೆಗಳ ಹೂಳೆತ್ತುವ ಯೋಜನೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಲಾಗಿದೆ.
ಬೀದರ್ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರ್ಥಿಕ ನೆರವು ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಕಾರ್ಖಾನೆಯ ಆಡಳಿತ ಮಂಡಳಿಯಲ್ಲಿ ನಡೆದಿರುವುದಾಗಿ ಆರೋಪಿಸಲಾದ ಅಕ್ರಮಗಳ ಕುರಿತು ಕಳೆದ 15 ವರ್ಷಗಳಲ್ಲಿ ಕಾರ್ಯನಿರ್ವಹಿಸಿದ ಆಡಳಿತ ಮಂಡಳಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಷೇರುದಾರ ರೈತರ ಹಿತಾಸಕ್ತಿಯನ್ನು ರಕ್ಷಿಸಬೇಕು ಎಂದು ಆಗ್ರಹಿಸಲಾಗಿದೆ.
ಕಾರ್ಮಿಕರ ಬಾಕಿ ವೇತನ ಸೇರಿದಂತೆ ಸುಮಾರು 38 ಕೋಟಿ ರೂ. ಬಾಕಿ ಹಣವನ್ನು ಪಾವತಿಸಬೇಕು. ಯೋಜನಾ ನೌಕರರನ್ನು ಖಾಯಂಗೊಳಿಸಬೇಕು. ಬೀದರ್ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘದ ನೌಕರರಿಗೆ ಪರಿಷ್ಕೃತ ಕನಿಷ್ಠ ವೇತನ ಹಾಗೂ ಮೀಸಲಾತಿ ಜಾರಿಗೊಳಿಸಬೇಕು. ರೈತರ ಭೂಮಿಗಳ ಸರ್ಕಾರಿ ಸರ್ವೆ ಕಾರ್ಯವನ್ನು ಸರ್ಕಾರದ ವತಿಯಿಂದಲೇ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಕಳೆದ ಸಾಲಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಬಾಕಿ ಹಣವನ್ನು ಕೂಡಲೇ ಪಾವತಿಸಬೇಕು. ಹಿಂದಿನ ಪದ್ಧತಿಯಂತೆ ಕಬ್ಬು ಬೆಳೆಗಾರರಿಗೆ ಸಕ್ಕರೆ ವಿತರಿಸಬೇಕು. 2026ನೇ ಸಾಲಿನಲ್ಲಿ ಕಬ್ಬು ಪೂರೈಸುವ ರೈತರಿಗೆ ಪ್ರತಿ ಟನ್‌ಗೆ 5 ಸಾವಿರ ರೂ. ದರ ನಿಗದಿಪಡಿಸುವ ಕುರಿತು ರೈತರ ಸಭೆ ಕರೆಯಬೇಕು ಎಂದು ಒತ್ತಾಯಿಸಲಾಗಿದೆ.
ಒಂದು ವಾರದೊಳಗೆ ರೈತರ ಸಭೆ ಕರೆಯದಿದ್ದರೆ ಯಾವುದೇ ಪೂರ್ವ ಸೂಚನೆ ನೀಡದೇ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಲ್ಲಿಕಾರ್ಜುನ್ ಸ್ವಾಮಿ, ಶಿವರಾಜ್ ಪಾಟೀಲ್ ಅತಿವಾಳ್, ಶಿವರಾಯ್ ಮುದಾಳೆ, ನಜೀರ್ ಅಹ್ಮದ್, ಶಫಾಯತ್ ಅಲಿ, ವೀರಶೆಟ್ಟಿ ವಟ್ಟಂಬೆ, ಕೊಂಡಿಬಾರಾವ್ ಪಾಂಡ್ರೆ, ಧೂಳಪ್ಪ ಸೋರಳ್ಳಿ, ಚಂದ್ರಕಾಂತ್ ಪಾಟೀಲ್ ಕಪಲಾಪೂರ್, ರಾಜೇಂದ್ರ ಪಾಟೀಲ್ ಅಣದೂರವಾಡಿ, ವೀರರೆಡ್ಡಿ ಪಾಟೀಲ್, ನಾಗಶೆಟ್ಟಿ, ವಿಜಯಕುಮಾರ್ ಬಾವಗಿ, ಅರುಣ್ ಪಟೇಲ್, ಪ್ರಭು ಹೊಚಕನಳ್ಳಿ, ಪ್ರಭು ತಗಣಿಕರ್, ಶೇಕ್ ನವಾಜ್, ಖಮರ್ ಪಟೇಲ್, ಮೂಯೀದ್ ಸಂತಪೂರ್, ರಾಜಕುಮಾರ್ ಬಗದಲ್‌ಕರ್, ಬಾಬುರಾವ್ ಹೊನ್ನಾ, ಖದೀರಮಿಯ್ಯಾ, ಅಶೋಕ್ ಕಾರಬಾರಿ, ವಿಠಲ್ ರೆಡ್ಡಿ ಆಣದೂರ್, ರಾಜಕುಮಾರ್ ಸ್ವಾಮಿ, ಅಶೋಕ್ ಪಾಟೀಲ್, ಶ್ರೀವಾಸ್ ಜೋಶಿ, ಬಸವರಾಜ್ ಪಾಟೀಲ್, ಸುಧಾಕರ್ ಬನ್ನಾಳೆ, ಪ್ರಕಾಶ್ ಅಲ್ಮಾಜೆ, ಸಂತೋಷ್ ಗುದಗೆ, ರುದ್ರಸ್ವಾಮಿ, ಮಾರುತಿ ಧರಗೊಂಡ್ ಹಾಗೂ ಸನ್ಮುಖಪ್ಪ ಆಣದೂರ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.






