ಬೀದರ್ | ರೈತರ ಖಾತೆಗೆ ಕಬ್ಬಿನ ಹಣ ಜಮೆ ಮಾಡಲು ಒತ್ತಾಯಿಸಿ ರೈತರಿಂದ ಪ್ರತಿಭಟನೆ

ಬೀದರ್ : ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿ ಸುಮಾರು 6 ರಿಂದ 7 ತಿಂಗಳು ಕಳೆದರೂ ಕೂಡ ಇಲ್ಲಿಯವರೆಗೆ ರೈತರ ಖಾತೆಗೆ ಹಣ ಜಮೆ ಮಾಡಿರುವುದಿಲ್ಲ. ತಕ್ಷಣವೇ ರೈತರ ಖಾತೆಗೆ ಹಣ ಜಮೆ ಮಾಡಬೇಕು ಎಂದು ಒತ್ತಾಯಿಸಿ ನಗರದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಇಂದು ಪ್ರತಿಭಟನಾ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು.
ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವ ಹಾಗೂ ಮುಖ್ಯಮಂತ್ರಿಗಳನ್ನು ಹಲವಾರು ಸಲ ಭೇಟಿಯಾಗಿ ಮನವಿ ಪತ್ರ ಕೊಟ್ಟರೂ ಕೂಡ ಪ್ರಯೋಜನವಾಗಿಲ್ಲ. ತಾವುಗಳು ಕಾರ್ಖಾನೆಗಳಲ್ಲಿನ ಸಕ್ಕರೆ ಜಪ್ತಿ ಮಾಡಿದ್ದೀರಿ. ಆದರೆ ಇಲ್ಲಿಯವರೆಗೆ ರೈತರಿಗೆ ಅನುಕೂಲವಾಗಿಲ್ಲ. ತಕ್ಷಣವೇ ಕಬ್ಬಿನ ಹಣ ರೈತರ ಖಾತೆಗೆ ಜಮೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈಗ ಮುಂಗಾರು ಹಂಗಾಮಿನ ಬಿತ್ತುವ ಸಮಯ ಇರುವುದರಿಂದ ರೈತರಿಗೆ ಬಿತ್ತುವ ಬೀಜ, ಗೊಬ್ಬರ, ಕೃಷಿಯಲ್ಲಿ ಉಳುಮೆ ಮಾಡಲು ಖರ್ಚು, ರೈತರ ಮಕ್ಕಳಿಗೆ ಶಾಲಾ ಕಾಲೇಜುಗಳ ಪ್ರವೇಶ ಶುಲ್ಕ, ಪಠ್ಯ ಪುಸ್ತಕಗಳ ಖರ್ಚು, ಮದುವೆ ಸಮಾರಂಭಗಳು ಹೀಗೆ ಇನ್ನೀತರ ಖರ್ಚು ವೆಚ್ಚಗಳು ಇರುತ್ತವೆ. ಆದರೆ ಜಿಲ್ಲೆಯಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರ, ಚುನಾಯಿತ ಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆಯವರ ನೇತೃತ್ವದ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ 2700 ರೂ. ನಿಗದಿ ಮಾಡಲಾಗಿತ್ತು. ಅದರಂತೆಯೇ ಎಲ್ಲಾ ರೈತರ ಖಾತೆಗೆ ಹಣ ಜಮೆ ಮಾಡಬೇಕು. ಭಾಲ್ಕೆಶ್ವರ್, ನಾರಂಜಾ ಮತ್ತು ಬಿ.ಕೆ.ಎಸ್.ಕೆ. ಕಾರ್ಖಾನೆಯವರು ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿರುವ ಕೆಲವೇ ರೈತರ ಖಾತೆಗೆ ಹಣ ಜಮೆ ಮಾಡಿದ್ದಾರೆ. ಇನ್ನೂ ಬಹಳಷ್ಟು ರೈತರ ಬಿಲ್ಲು ಬಾಕಿ ಇದ್ದು, ಅದನ್ನು ಶೀಘ್ರದಲ್ಲೇ ಜಮೆ ಮಾಡಿಸಬೇಕು ಎಂದು ಒತ್ತಾಯಿಸಲಾಗಿದೆ.
ರೈತರ ಖಾತೆಗೆ ಕಬ್ಬಿನ ಹಣ ಹಾಕದಿದ್ದರೆ ಮುಂಬರುವ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು. ಆ ಹೋರಾಟದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಎಚ್ಚರಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಿದ್ರಾಮಪ್ಪಾ ಆಣದೂರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ್ ಸ್ವಾಮಿ ಸಿರ್ಸಿ, ಶ್ರೀಮಂತ್ ಬಿರಾದಾರ್, ಶಂಕ್ರೆಪ್ಪಾ ಪಾರಾ, ಶೇಷರಾವ್ ಕಣಜಿ, ಚಂದ್ರಶೇಖರ್ ಜಮಖಂಡಿ, ಬಾಬುರಾವ್ ಜೋಳದಾಬಕಾ, ಸುಭಾಷ್ ರಗಟೆ, ನಾಗಯ್ಯಾ ಸ್ವಾಮಿ, ಪ್ರವೀಣ ಕುಲಕರ್ಣಿ, ಪ್ರಕಾಶ್ ಬಾವಗೆ, ಸತೀಶ್, ರೇವಣಸಿದ್ದಪ್ಪ ಯರಬಾಗ್, ಮಲ್ಲಿಕಾರ್ಜುನ್ ಬಿರಾದಾರ್, ಸುಮಂತ್, ವಿಠಲ್ ಪಾಟೀಲ್, ಧೂಳಪ್ಪಾ ಆಣದೂರ್, ಮಲ್ಲಿಕಾರ್ಜುನ್ ಚಕ್ಕಿ, ವಿಶ್ವನಾಥ್ ಧರಣಿ, ಬಸಪ್ಪಾ ಆಲೂರ್ ಹಾಗೂ ರಾಜಕುಮಾರ್ ಪಾಟೀಲ್ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.







