Bidar | 11ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ : ಪ್ರತಿ ಟನ್ ಕಬ್ಬಿಗೆ 4 ಸಾವಿರ ರೂ. ಘೋಷಿಸಲು ಒತ್ತಾಯ

ಬೀದರ್: ಜಿಲ್ಲೆಯ ರೈತರ ಕಬ್ಬಿನ ಬೆಲೆ ಸೇರಿದಂತೆ ನಾಲ್ಕು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಅಂಬೇಡ್ಕರ್ ವೃತ್ತದ ಎದುರು ನಡೆಯುತ್ತಿರುವ ರೈತರ ಹೋರಾಟ 11ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿ ಟನ್ ಕಬ್ಬಿಗೆ 4 ಸಾವಿರ ರೂ. ದರ ಘೋಷಿಸಬೇಕು ಹಾಗೂ ನ.23ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರ ಬೇಡಿಕೆಗಳಿಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.
ಜಿಲ್ಲೆಯ ರೈತರು ಬರಗಾಲದ ಸಂಕಷ್ಟದಿಂದ ತತ್ತರಿಸಿದ್ದು, ಅವರ ಬದುಕು ದುಸ್ತರವಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿ ಟನ್ ಕಬ್ಬಿಗೆ 4,500 ರೂ. ಹಾಗೂ ಕೆಲವು ಕಡೆ 4,000 ರೂ. ದರ ಘೋಷಿಸಲಾಗಿದೆ. ಬೀದರ್ ಜಿಲ್ಲೆಯೂ ಕರ್ನಾಟಕದ ಭಾಗವಾಗಿದ್ದರೂ ಇಲ್ಲಿನ ರೈತರಿಗೆ ಏಕೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ರೈತ ಮುಖಂಡರು ಪ್ರಶ್ನಿಸಿದ್ದಾರೆ.
ಬೆಳಗಾವಿಯಲ್ಲಿ ರೈತರ ಹೋರಾಟಕ್ಕೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಿದ್ದರು. ಅದೇ ರೀತಿ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಜಿಲ್ಲೆಯ ರೈತರ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.
ನ.12ರಂದು ಜಿಲ್ಲಾಧಿಕಾರಿಗಳ ಮೂಲಕ ನಾಲ್ಕು ಬೇಡಿಕೆಗಳ ಮನವಿ ಸಲ್ಲಿಸಲಾಗಿತ್ತು. ರೈತರು ನಿರಂತರ ಒಂಬತ್ತು ದಿನ ಹೋರಾಟ ನಡೆಸಿ, ಹತ್ತನೇ ದಿನ ಬೀದರ್ ಬಂದ್‌ಗೆ ಕರೆ ನೀಡಿದ್ದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಇನ್ನೂ ಮೂರು ದಿನಗಳ ಕಾಲಾವಕಾಶ ಕೇಳಿರುವುದು ರೈತರಲ್ಲಿ ಅಸಮಾಧಾನ ಮೂಡಿಸಿದೆ ಎಂದು ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.
ನ.23ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳು ನಿಗದಿಪಡಿಸಿರುವ ಸಭೆಯಂತೆ, ರೈತರು ಹೋರಾಟ ನಡೆಸುತ್ತಿರುವ ಸ್ಥಳಕ್ಕೆ ಖುದ್ದಾಗಿ ಆಗಮಿಸಿ ನಾಲ್ಕು ಬೇಡಿಕೆಗಳಿಗೆ ಸ್ಪಂದಿಸಬೇಕು. ಅದರಲ್ಲೂ ಪ್ರತಿ ಟನ್ ಕಬ್ಬಿಗೆ 4 ಸಾವಿರ ರೂ. ದರ ಘೋಷಿಸಬೇಕು. ಇಲ್ಲದಿದ್ದರೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ರೈತ ಮುಖಂಡರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಕಿರಣ್ ಖಂಡ್ರೆ, ಬಾಬುರಾವ್ ಹೊನ್ನಾ, ಮಲ್ಲಿಕಾರ್ಜುನ್ ಸ್ವಾಮಿ, ಓಂಪ್ರಕಾಶ್ ರೊಟ್ಟೆ, ಗುಂಡು ರೆಡ್ಡಿ, ಕೆ.ಡಿ. ಗಣೇಶ್, ವಿಠಲರಾವ್ ಮೇತ್ರೆ, ಜೈರಾಜ್ ಕೊಳ್ಳಾ, ನಾಗಶೆಟ್ಟೆಪ್ಪ ಲಂಜವಾಡೆ ಹಾಗೂ ಶಿವರಾಜ್ ಪಾಟೀಲ್ ಅತಿವಾಳ್ ಸೇರಿದಂತೆ ಇತರ ರೈತರು ಉಪಸ್ಥಿತರಿದ್ದರು.






