ಬೀದರ್ | ಹಣಕಾಸು ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮವನ್ನು ತಪ್ಪದೇ ಪಾಲಿಸಬೇಕು : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ್ : ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಫೈನಾನ್ಸ್, ಲೇವಾದೇವಿ ವ್ಯಾಪಾರಸ್ಥರು, ಮೈಕ್ರೋ ಫೈನಾನ್ಸ್ ಹಣಕಾಸು ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್ ನೀಡುವ ಮಾರ್ಗದರ್ಶನ ಹಾಗೂ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮತ್ತು ಜಿಲ್ಲೆಯ ಎಲ್ಲಾ ಮೈಕ್ರೋಫೈನಾನ್ಸ್ ವ್ಯವಸ್ಥಾಪಕರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೈಕ್ರೋಫೈನಾನ್ಸ್ ಸಾಲ ಕೊಡುವ ಮುನ್ನ ಸಾಲಗಾರರ ಕುಟುಂಬದ ಆದಾಯ ಸೇರಿದಂತೆ ಮತ್ತಿತರ ಪೂರ್ವಾಪರಿಗಳನ್ನು ಪರಿಶೀಲನೆ ಮಾಡಬೇಕು. ಅವರ ಆದಾಯದ ಶೇ.50 ರಷ್ಟು ಮಾತ್ರ ಸಾಲ ನೀಡಬೇಕು. ಆದರೆ, ಅವರು ಸಾಲ ತೆಗೆದುಕೊಳ್ಳುವ ಸಾಮರ್ಥ್ಯ ನೋಡದೆ ಸಾಲ ನೀಡಿರುವ ಬಗ್ಗೆ ಕಂಡುಬರುತ್ತಿದೆ. ಇವುಗಳಿಗೆ ಆಸ್ಪದ ನೀಡಬಾರದು. ಸಾಲ ನೀಡುವ ಹಾಗೂ ಸಾಲ ತೆಗೆದುಕೊಳ್ಳುವವರಿಬ್ಬರೂ ಸಹ ಆರ್ಥಿಕ ಶಿಸ್ತು ಪಾಲಿಸಬೇಕು ಎಂದರು.
ಆರ್ ಬಿ ಐ ಮಾರ್ಗಸೂಚಿಯ ಪ್ರಕಾರ ಮೈಕ್ರೋಫೈನಾನ್ಸ್ ಗಳು 3 ಲಕ್ಷ ರೂ. ವರೆಗೆ ಮಾತ್ರ ಸಾಲ ನೀಡಲು ಅವಕಾಶವಿದೆ. ಸಾಲ ಮರುಪಾವತಿಯನ್ನು ಕಾನೂನಿನ ಅನ್ವಯ ಕ್ರಮ ಕೈಗೊಳ್ಳಬೇಕು. ಕಾನೂನು ಉಲ್ಲಂಘಿಸಿ ದೌರ್ಜನ್ಯ, ಕೆಟ್ಟ ಪದಗಳಲ್ಲಿ ಬೈಯುವುದು, ದಬ್ಬಾಳಿಕೆ ಕಿರಕುಳ ನೀಡುವುದು ಮಾಡಿದ್ದಲ್ಲಿ ಅಂತವರ ವಿರುದ್ಧ ಪೋಲೀಸ್ನವರು ಪ್ರಕರಣ ದಾಖಲಿಸಿಕೊಳ್ಳಲು ಅವಕಾಶವಿದೆ ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಸುಮಾರು 1,193 ಕೋಟಿ ರೂ. ಸಾಲ 1 ಲಕ್ಷ 79 ಸಾವಿರ ಜನರಿಗೆ ವಿತರಣೆ ಮಾಡಲಾಗಿದೆ ಎಂದು ಎಂ ಎಫ್ ಐ ಎನ್ ನ ಸ್ಟೇಟ್ ಕೋಆರ್ಡಿನೆಟರ್ ಮಂಜುನಾಥ್ ಎಸ್. ಅವರು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಮಾತನಾಡಿ, ಮೈಕ್ರೋಫೈನಾನ್ಸ್ ಗಳಲ್ಲಿ ತೆಗೆದುಕೊಳ್ಳುವ ವ್ಯವಹಾರಗಳು ಶಾಂತಿಯುತವಾಗಿ ಆಗಬೇಕು. ಸಾಲ ವಸೂಲಾತಿಗಾಗಿ ಫೈನಾನ್ಸ್ ಕಂಪನಿಗಳು ಬೆಳಿಗ್ಗೆ 9ಕ್ಕೂ ಮುನ್ನ ಸಂಜೆ 5ರ ನಂತರ ಸಾಲಗಾರರ ಮನೆಗೆ ಹೋಗಬಾರದು. ಹಾಗೆಯೇ ಯಾವುದೇ ರೀತಿಯ ದೌರ್ಜನ್ಯ ನಡೆಸಬಾರದು. ಒಂದೊಮ್ಮೆ ಈ ನಿಯಮ ಉಲ್ಲಂಘಿಸಿದ್ದಲ್ಲಿ ಅಂತವರ ಮೇಲೆ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮತ್ತು ಜಿಲ್ಲೆಯ ಎಲ್ಲಾ ಮೈಕ್ರೋಫೈನಾನ್ಸ್ ವ್ಯವಸ್ಥಾಪಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.







