ಬೀದರ್: ಗುಂಡಿನ ದಾಳಿ ಪ್ರಕರಣ; ಗಾಯಾಳುವನ್ನು ಭೇಟಿ ಮಾಡಿದ ಸಚಿವ ಈಶ್ವರ್ ಖಂಡ್ರೆ

ಬೀದರ್ : ಹಾಡು ಹಗಲೇ ಗುಂಡಿನ ದಾಳಿ ನಡೆಸಿ ಹಣ ದೋಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಿವಕುಮಾರ್ ಅವರನ್ನು ಸಚಿವ ಈಶ್ವರ್ ಖಂಡ್ರೆ ಅವರು ರಾತ್ರಿ ಹೈದ್ರಾಬಾದ್‌ನ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಗುರುವಾರ ಬೆಳಿಗ್ಗೆ ಎಟಿಎಂ ಗೆ ದುಡ್ಡು ಹಾಕಲು ಎಸ್ ಬಿ ಐ ಬ್ಯಾಂಕಿನಿಂದ ದುಡ್ಡು ತೆಗೆದುಕೊಂಡು ಹೊರ ಬರುತಿದ್ದಾಗ ಎಸ್ ಬಿ ಐ ನ ಎಟಿಎಂ ಸೆಕ್ಯೂರಿಟಿ ಎಜೆನ್ಸಿ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆದಿತ್ತು. ಗುಂಡಿನ ದಾಳಿಯಲ್ಲಿ ಒಬ್ಬ ಸಿಬ್ಬಂದಿ ಮೃತಪಟ್ಟಿದ್ದು, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದರು.
ಸಚಿವ ಈಶ್ವರ ಖಂಡ್ರೆ ಹೈದ್ರಾಬಾದ್ ನ ಕೇರ್ ಆಸ್ಪತ್ರೆಗೆ ಗುರುವಾರ ರಾತ್ರಿ ಸುಮಾರು 11 ಗಂಟೆ ಭೇಟಿ ನೀಡಿದರು. ಶಿವಕುಮಾರ್ ಕುಟುಂಬದವರಿಗೆ ಧೈರ್ಯ ಹೇಳಿದ ಅವರು, ಶಿವಕುಮಾರ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು. ವೈದ್ಯರೊಂದಿಗೆ ಸಮಾಲೋಚಿಸಿದ ಸಚಿವರು ಎಲ್ಲ ಅಗತ್ಯ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ದುರಂತಕ್ಕೆ ಕಾರಣವಾದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಲು ಕ್ರಮ ಕೈಗೊಳ್ಳುವುದಾಗಿ ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ.
ಘಟನೆಯಲ್ಲಿ ಮೃತಪಟ್ಟ ಸಿಬ್ಬಂದಿ ಗಿರಿ ವೆಂಕಟೇಶ್ ನಿವಾಸಕ್ಕೆ ಸಚಿವರು ಇಂದು ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.







