Bidar | ಚಿಟಗುಪ್ಪದಲ್ಲಿ ಅರಣ್ಯ ವಲಯ ಕಚೇರಿ, ಸಾಲುಮರದ ತಿಮ್ಮಕ್ಕ ವೃಕ್ಷದ್ಯಾನಕ್ಕೆ ಶಂಕುಸ್ಥಾಪನೆ

ಬೀದರ್ : ಚಿಟಗುಪ್ಪ ಪಟ್ಟಣದ ಹೊರವಲಯದಲ್ಲಿ ಪ್ರಾದೇಶಿಕ ಅರಣ್ಯ ವಲಯ ಕಚೇರಿ ಕಟ್ಟಡ ಹಾಗೂ ಸಾಲುಮರದ ತಿಮ್ಮಕ್ಕ ವೃಕ್ಷದ್ಯಾನ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಪ್ರಾದೇಶಿಕ ಅರಣ್ಯ ವಿಭಾಗ ಬೀದರ್, ಕೆಕೆಆರ್‌ಡಿಎಲ್ ಮತ್ತು ನಿರ್ಮಿತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಬುಧವಾರ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ನೈಸರ್ಗಿಕ ಸಂಪತ್ತನ್ನು ಹಿತಮಿತವಾಗಿ ಬಳಸಬೇಕು. ಭೂಭಾಗದ ಶೇ.33ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ, ನಮ್ಮ ರಾಜ್ಯದಲ್ಲಿ ಶೇ.21ರಷ್ಟು ಹಾಗೂ ಬೀದರ್ ಜಿಲ್ಲೆಯಲ್ಲಿ ಶೇ.5.6ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಕೊಪ್ಪಳ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶದ ಪ್ರಮಾಣ ಇನ್ನೂ ಕಡಿಮೆಯಿದೆ ಎಂದರು.
ನಾವು ಎಷ್ಟು ಹೆಚ್ಚು ಮರಗಳನ್ನು ಬೆಳೆಸುತ್ತೇವೆಯೋ ಅಷ್ಟು ಲಾಭವಿದೆ. ಆಮ್ಲಜನಕದ ಕೊರತೆಯಿಂದ ಜನರು ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ. ಜಗತ್ತು ಮತ್ತು ಮುಂದಿನ ಪೀಳಿಗೆಯ ಉಳಿವಿಗಾಗಿ ಗಿಡಮರಗಳನ್ನು ಬೆಳೆಸುವುದು ಅತ್ಯಗತ್ಯ. ಸಾರ್ವಜನಿಕರು ಪಿಒಪಿ ಗಣಪತಿ ಮೂರ್ತಿಗಳನ್ನು ಬಳಸಬಾರದು. ದೀಪಾವಳಿ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಿತವಾಗಿ ಸಿಡಿಸಬೇಕು ಎಂದು ಸಲಹೆ ನೀಡಿದರು.
ಪ್ರತಿ ತಾಲೂಕಿನಲ್ಲಿ ಕನಿಷ್ಠ ಒಂದು ವೃಕ್ಷದ್ಯಾನ ನಿರ್ಮಿಸಬೇಕು ಎಂಬ ಉದ್ದೇಶದಿಂದ ಚಿಟಗುಪ್ಪ ತಾಲೂಕಿಗೆ ಮುಂಗಡವಾಗಿಯೇ ಸಚಿವನಾಗಿದ್ದಾಗ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದೇನೆ. ಇದಕ್ಕಾಗಿ ಯಾರೂ ನನಗೆ ಮನವಿ ಸಲ್ಲಿಸಿರಲಿಲ್ಲ. ನಾನೇ ಖುದ್ದಾಗಿ ಈ ಕ್ರಮ ಕೈಗೊಂಡಿದ್ದೇನೆ ಎಂದು ತಿಳಿಸಿದರು.
ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸಲ್ಲಿಸಿರುವ ಬೇಡಿಕೆಗಳನ್ನು ಪರಿಗಣಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಗ್ರಾಮೀಣ ಅಭಿವೃದ್ಧಿಗಾಗಿ 16 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವನಾದ ಬಳಿಕ ಮನೆಮನೆಗೆ ತೆರಳಿ ಇ-ಸ್ವತ್ತು ನೀಡುವ ಯೋಜನೆಯನ್ನು ರೂಪಿಸಿದ್ದೇನೆ ಎಂದರು.
ಶಾಸಕ ಡಾ. ಸಿದ್ದು ಪಾಟೀಲ್ ಮಾತನಾಡಿ, ಚಿಟಗುಪ್ಪ ಪಟ್ಟಣದಲ್ಲಿ ಭಾಲ್ಕಿ ಮಾದರಿಯಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಆಟದ ಮೈದಾನ ನಿರ್ಮಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು. ಇದಕ್ಕಾಗಿ ತಮ್ಮ ಅನುದಾನದಿಂದ 2 ಕೋಟಿ ರೂ. ನೀಡುವುದಾಗಿ ಘೋಷಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ್ ಪಾಟೀಲ್, ಭೀಮರಾವ್ ಪಾಟೀಲ್, ಬಾಬು ಹೊನ್ನನಾಯಕ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.






