ಬೀದರ್ | ಗಣೇಶ ಉತ್ಸವವನ್ನು ಪರಿಸರ ಸ್ನೇಹಿ, ಸೌಹಾರ್ದತೆಯಿಂದ ಆಚರಿಸಬೇಕು : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ್ : ಜಿಲ್ಲೆಯಲ್ಲಿ ಮುಂಬರುವ ಗಣೇಶ ಉತ್ಸವವನ್ನು ಪರಿಸರ ಸ್ನೇಹಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಗಣೇಶ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪಿಓಪಿ ಹಾಗೂ ರಾಸಾಯನಿಕ ಗುಣಗಳ್ಳುಳ್ಳ ವಸ್ತುಗಳು ಬಳಸಿ ತಯಾರಿಸಲಾದ ಗಣೇಶ ವಿಗ್ರಹಗಳ ಉತ್ಪಾದನೆ, ಸಂಗ್ರಹ, ಮಾರಾಟ ನಿಷೇಧಿಸಿ, ಮಣ್ಣಿನಿಂದ ಮಾಡಿದ ವಿಗ್ರಹಗಳು ಬಳಕೆ ಮಾಡಬೇಕು. ನೀರಿನ ಮೂಲಗಳಾದ ನದಿ, ತೊರೆ, ಹಳ್ಳ, ಕೆರೆ, ಬಾವಿ ಇವುಗಳ ನೀರು ಮಾಲಿನ್ಯವಾಗದಂತೆ ನೋಡಿಕೊಳ್ಳಬೇಕು ಎಂದರು.
ಗಣೇಶ ವಿಗ್ರಹಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ದಿನದಂದು ನಡೆಯುವ ಮೆರವಣಿಗೆಯಲ್ಲಿ ಕಡಿಮೆ ಶಬ್ದ ಇರುವ ಡಿಜೆ ಮಾತ್ರ ಬಳಸಬೇಕು. ಸಮಯ ಪಾಲನೆ ಮಾಡಬೇಕು. ಒಂದು ವೇಳೆ ಹೆಚ್ಚಿನ ಶಬ್ದ ಹೊಂದಿರುವ ಡಿಜೆ ಕಂಡುಬಂದರೆ ಅದನ್ನು ತಕ್ಷಣ ಜಪ್ತಿ ಮಾಡಲಾಗುವುದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೌಹಾರ್ದತೆಯಿಂದ ಗಣೇಶ ಉತ್ಸವ ಆಚರಿಸಬೇಕು ಎಂದು ಹೇಳಿದರು.
ಗಣೇಶ ಮಂಡಳಿ ಕಾರ್ಯಾಧ್ಯಕ್ಷ ಬಾಬು ವಾಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಈಶ್ವರ್ ಉಳ್ಳಾಗಡ್ಡಿ, ಡಿವೈಎಸ್ಪಿ ಶಿವನಗೌಡ ಪಾಟೀಲ್, ಪರಿಸರಾಧಿಕಾರಿ ಮೃತ್ಯುಂಜಯ, ಮುಖಂಡರಾದ ಶಶಿ ಹೊಸಳ್ಳಿ, ರಮೇಶ್ ಚಿಟ್ಟಾ ಹಾಗೂ ಗಣೇಶ್ ಭೊಸಲೆ ಸೇರಿದಂತೆ ಇತರರು ಉಪಸ್ಥಿತರಿದ್ದರು.







