ಬೀದರ್ : 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಗಾಂಜಾ ವಶ; ಮೂವರ ಬಂಧನ

ಬೀದರ್ : ಔರಾದ್ ತಾಲೂಕಿನ ಜಂಬಗಿ(ಬಿ) ಗ್ರಾಮದ ಆರಣ್ಯ ಪ್ರದೇಶದ ಹಂಗರಗಾ ಗ್ರಾಮದ ರಸ್ತೆಯಲ್ಲಿ ಆಟೋದಲ್ಲಿ ಸಾಗಿಸುತ್ತಿದ್ದ ಸುಮಾರು 10,31,500 ರೂ. ಮೌಲ್ಯದ 20ಕೆ.ಜಿ. 630 ಗ್ರಾಂ ತೂಕವುಳ್ಳ ಗಾಂಜಾ ಹಾಗೂ ಸಾಗಿಸುತ್ತಿದ್ದ ಆಟೋ ವಶಕ್ಕೆ ಪಡೆದು, ಮೂವರನ್ನು ಬಂಧಿಸಿದ ಘಟನೆ ನಡೆದಿದೆ.
ಸಂತಪುರ್ ಪೊಲೀಸ್ ಠಾಣೆಯ ಪಿಎಸ್ಐ ಅವರಿಗೆ ಗಾಂಜಾ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ, ಮೇಲಧಿಕಾರಿಗಳ ಮಾರ್ಗದರ್ಶನದಂತೆ ಸಂತಪುರ್ ಪೊಲೀಸ್ ಠಾಣೆಯ ಪಿಎಸ್ಐ ದಿನೇಶ್ ಎಂ.ಟಿ ಹಾಗೂ ಅವರ ತಂಡದಿಂದ ದಾಳಿ ನಡೆಸಲಾಗಿತ್ತು.
ಔರಾದ್ ತಾಲೂಕಿನ ಜಂಬಗಿ (ಬಿ) ಗ್ರಾಮದ ಆರಣ್ಯ ಪ್ರದೇಶದ ಹತ್ತಿರ ತೆಲಂಗಾಣ ರಾಜ್ಯದ ಹಂಗರಗಾ ಗ್ರಾಮದ ಕಡೆಯಿಂದ ಬರುತ್ತಿರುವ ಆಟೋ ಒಂದರಲ್ಲಿ ಅಕ್ರಮ ಗಾಂಜಾ ಸಾಗಿಸಲಾಗುತ್ತಿತ್ತು. ಆಟೋದಲ್ಲಿದ್ದ ಎರಡು ಬ್ಯಾಗ್ ಗಳು ಪರಿಶೀಲನೆ ನಡೆಸಿದಾಗ ಅದರಲ್ಲಿ 10,31,500 ರೂ. ಮೌಲ್ಯದ 20ಕೆ.ಜಿ. 630 ಗ್ರಾಂ ತೂಕವುಳ್ಳ ಗಾಂಜಾ ಪತ್ತೆಯಾಗಿದೆ. ಗಾಂಜಾ ಹಾಗೂ 8೦ ಸಾವಿರ ರೂ. ಮೌಲ್ಯದ ಆಟೋ ವಶಕ್ಕೆ ಪಡೆಯಲಾಗಿದ್ದು, ಮೂವರನ್ನು ಬಂಧಿಸಲಾಗಿದೆ .
ಬಂಧಿತ ಮೂವರಲ್ಲಿ ಇಬ್ಬರು ಔರಾದ್ ತಾಲ್ಲೂಕಿನ ಘಾಮಾ ತಾಂಡಾದವರಾಗಿದ್ದು, ಇನ್ನೊಬ್ಬ ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ಸೂರಥ್ಯ ನಾಯಕ ತಾಂಡಾದವನಾಗಿದ್ದಾನೆ.
ಈ ಘಟನೆಗೆ ಸಂಬಂಧಿಸಿದಂತೆ ಸಂತಪುರ್ ಪೊಲೀಸ್ ಠಾಣೆಯಲ್ಲಿ ಎನ್ ಡಿ ಪಿ ಎಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.







