ಬೀದರ್ | 43 ಲಕ್ಷ ರೂ. ಗಿಂತ ಅಧಿಕ ಮೌಲ್ಯದ ಗಾಂಜಾ ಜಪ್ತಿ : ಆರೋಪಿಯ ಬಂಧನ

ಬೀದರ್ : ನಗರದ ಗಾಂಧಿ ಗಂಜ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಆಶ್ರಾ ಕಾಲೋನಿ ಹತ್ತಿರ ಕಾರಿನಲ್ಲಿದ್ದ 43 ಲಕ್ಷ ರೂ. ಗಿಂತ ಅಧಿಕ ಮೌಲ್ಯದ 43.479 ಗ್ರಾಂ ತೂಕದ ಗಾಂಜಾವನ್ನು ಗಾಂಧಿ ಗಂಜ್ ಪೊಲೀಸರು ಜಪ್ತಿ ಮಾಡಿದ್ದು, ಮಹಿಳಾ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ಪ್ರದೀಪ್ ಗುಂಟಿ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಶನಿವಾರ (ಸೆ. 13) ಸಾಯಂಕಾಲ ಪೊಲೀಸ್ ಬಾತ್ಮಿದಾರರಿಂದ ಖಚಿತ ಮಾಹಿತಿ ಬಂದ ಮೇರೆಗೆ ಡಿವೈಎಸ್ಪಿ ಶಿವನಗೌಡ ಪಾಟೀಲ್ ಅವರ ನೇತೃತ್ವದಲ್ಲಿ ಪೊಲೀಸರ ತಂಡ ದಾಳಿ ನಡೆಸಿತ್ತು.
ಬೀದರ್-ಗೂನಳ್ಳಿ ರಸ್ತೆ ಮೇಲೆ ರಾಜು ಕಡ್ಯಾಳ್ ಕಾಲೇಜಿನ ಹತ್ತಿರದಿಂದ ಹೋಗುತ್ತಿದ್ದಾಗ ಆಶ್ರಾ ಕಾಲೋನಿ ಹತ್ತಿರ ಒಂದು ಬಿಳಿ ಬಣ್ಣದ ಕಾರಿನ ಹತ್ತಿರ ಒಬ್ಬ ಮಹಿಳೆ ನಿಂತಿದ್ದು, ಪೊಲೀಸ್ ಜೀಪ್ ನೋಡಿದ ತಕ್ಷಣವೇ ಕಾರ್ ಚಾಲಕ ಕಾರಲ್ಲಿದ್ದ ಪ್ಯಾಕೆಟ್ ಹೊರಗೆ ಎಸೆದ ಕಾರನ್ನು ಗೂನಳ್ಳಿ ಕಡೆಗೆ ಒಡಿಸಿಕೊಂಡು ಹೋಗಿದ್ದನು. ಆಗ ಕಾರಿನ ಹತ್ತಿರ ನಿಂತಿದ್ದ ಮಹಿಳೆಯನ್ನು ವಿಚಾರಣೆ ಮಾಡಿದ್ದಾಗ ಕಾರಿನಿಂದ ಹೊರಗೆ ಬಿಸಾಡಿದ ಪ್ಯಾಕೆಟ್ ಗಳಲ್ಲಿ ಗಾಂಜಾ ಇದೆ. ಹಾಗೆಯೇ ಈ ಗಾಂಜಾವನ್ನು ಮದ್ಯಪ್ರದೇಶದಿಂದ ತಂದು ಕೋಡುತ್ತಾರೆ ಎಂದು ಅವಳು ಮಾಹಿತಿ ನೀಡಿದ್ದಾಳೆ ಎಂದು ಅವರು ತಿಳಿಸಿದ್ದಾರೆ.
ಕಾರು ಸಮೇತ ಓಡಿ ಹೋದವರ ಬಗ್ಗೆ ವಿಚಾರಿಸಿದಾಗ, ಅವರ ಹೆಸರು ರೇವಾ, ಕಿರು, ಹಾಗೂ ರಾಹುಲ್ ಎಂದು ಹೇಳಿದ್ದಾಳೆ. ನಂತರ ಕಾರಿನಿಂದ ಹೊರಗೆ ಎಸೆದ ಪಾಕೇಟ್ ಗಳನ್ನು ಪರಿಶೀಲಿಸಲಾಗಿದ್ದು, ಅದರಲ್ಲಿ ಸುಮಾರು 43,47,900 ರೂ. ಮೌಲ್ಯದ 43 ಕೆ.ಜಿ 479ಗ್ರಾಂ ಗಾಂಜಾ ಸಿಕ್ಕಿದೆ. ಈ ಗಾಂಜಾವನ್ನು ವಶಕ್ಕೆ ಪಡೆದು, ಆರೋಪಿತಳನ್ನು ಕಾನೂನು ನಿಯಮಾವಳಿಯಂತೆ ದಸ್ತಗಿರಿ ಮಾಡಲಾಗಿದೆ. ಆರೋಪಿತಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಕುರಿತು ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







