ಬೀದರ್ | ಬಾಲಕಿಯನ್ನು ಮೂರನೇ ಮಹಡಿಯಿಂದ ತಳ್ಳಿ ಕೊಂದ ಪ್ರಕರಣ : ಆರೋಪಿ ಮಹಿಳೆಯ ಬಂಧನ

ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ
ಬೀದರ್: ಮನೆಯ ಮೂರನೇ ಮಹಡಿಯಿಂದ ತಳ್ಳಿ 6 ವರ್ಷದ ಬಾಲಕಿ ಶಾನವಿಯನ್ನು ಕೊಂದ ಆರೋಪದಲ್ಲಿ ಮಲತಾಯಿಯನ್ನು ಬಂಧಿಸಲಾಗಿದ್ದು, ಆಕೆ ತನಿಖೆಯಲ್ಲಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.
ಆ.22 ರಂದು ಶಾನವಿ ಮೃತಪಟ್ಟ ಘಟನೆ ಮೊದಲು ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾಳೆ ಎಂದು ಪ್ರಕರಣ ದಾಖಲಾಗಿತ್ತು. ಆದರೆ, ಸೆ.13ರಂದು ಸಾರ್ವಜನಿಕರು ಒದಗಿಸಿದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ, ಮಲತಾಯಿ ಉದ್ದೇಶಪೂರ್ವಕವಾಗಿ ತಳ್ಳಿರುವುದು ಬಹಿರಂಗವಾಗಿದೆ. ನಂತರ ಶಾನವಿಯ ಅಜ್ಜಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿತ್ತು.
ಆರೋಪಿಯನ್ನು ಅದೇ ದಿನ ಬಂಧಿಸಿ ವಿಚಾರಣೆ ನಡೆಸಿದಾಗ, ಶಾನವಿಯನ್ನು ತಳ್ಳಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ತನಿಖೆಯಲ್ಲಿ ತಿಳಿದುಬಂದಂತೆ, ಆರೋಪಿಣಿ ಮೃತ ಶಾನವಿಯ ತಂದೆಯ ಎರಡನೇ ಹೆಂಡತಿ. ಶಾನವಿ ಮೊದಲ ಹೆಂಡತಿಯ ಮಗಳು. ಆರೋಪಿಗೆ ಈಗಾಗಲೇ ಎರಡು ಅವಳಿ ಮಕ್ಕಳು ಇದ್ದು, ಮುಂದಿನ ದಿನಗಳಲ್ಲಿ ಆಸ್ತಿ ಹಂಚಿಕೆಯಲ್ಲಿ ಶಾನವಿಗೂ ಪಾಲು ಸಿಗಬಹುದೆಂಬ ಭಯದಿಂದಲೇ ಈಕೆಯು ಮಗುವನ್ನು ಕೊಂದಿರುವುದು ಸ್ಪಷ್ಟವಾಗಿದೆ ಎಂದು ಎಸ್ಪಿ ವಿವರಿಸಿದರು.





