Bidar | ಬಾಲಕಿ ಮೃತ್ಯು ಪ್ರಕರಣ : ಮನವಿ ಪತ್ರ ಸಲ್ಲಿಸಲು ತೆರಳಿದ ಅಂಕುಶ್ ಗೋಖಲೆ ಬಂಧನ, ಬಿಡುಗಡೆ

ಬೀದರ್: ಕಮಲನಗರ್ ತಾಲೂಕಿನ ಬೆಳಕುಣಿ ಗ್ರಾಮದ ಬಾಲಕಿ ಮೃತ್ಯು ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಗೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಲು ತೆರಳುತ್ತಿದ್ದ ಜನರ ಧ್ವನಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಅಂಕುಶ್ ಗೋಖಲೆ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದ್ದಾರೆ.
ಬುಧವಾರ ಮನ್ನಾಏಖ್ಖೆಳ್ಳಿಯಲ್ಲಿ ಈ ಪ್ರಕರಣದ ಸೂಕ್ತ ತನಿಖೆ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲು ಅಂಕುಶ್ ಗೋಖಲೆ ಹಾಗೂ ಇತರರು ತೆರಳುತ್ತಿದ್ದರು. ಮಾರ್ಗ ಮಧ್ಯೆಯೇ ಅವರನ್ನು ಪೊಲೀಸರು ಬಂಧಿಸಿ ಹುಮನಾಬಾದ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು.
ಹುಮನಾಬಾದ್ ಪೊಲೀಸ್ ಠಾಣೆ ಎದುರು ಪೊಲೀಸ್ ಅಧಿಕಾರಿಗಳು ಮತ್ತು ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
“ನಮ್ಮ ಮನೆ ಮುಂದೆ ವಿನಾಕಾರಣ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಪೊಲೀಸ್ ಇಲಾಖೆ ದಲಿತರ ಮೇಲೆ ರೌಡಿಸಂ ನಡೆಸುತ್ತಿದೆ. ಕಾರಣವಿಲ್ಲದೆ ನಮ್ಮನ್ನು ಬಂಧಿಸಲಾಗುತ್ತಿದೆ. ಪ್ರತಿಭಟನೆ ನಡೆಸುವ ಹಕ್ಕು ಸಂವಿಧಾನ ನಮಗೆ ನೀಡಿದೆ. ನಮಗೆ ತಡೆಯುವವರು ನೀವು ಯಾರು?” ಎಂದು ಅಂಕುಶ್ ಗೋಖಲೆ ಪೊಲೀಸರನ್ನು ಪ್ರಶ್ನಿಸಿರುವುದು ವಿಡಿಯೋದಲ್ಲಿ ಕಾಣಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಗಳು, ಪ್ರಕರಣದ ತನಿಖೆ ನಡೆಯುತ್ತಿದ್ದು ಅನವಶ್ಯಕವಾಗಿ ಜನರಲ್ಲಿ ಗೊಂದಲ ಸೃಷ್ಟಿಸಬಾರದು ಎಂದು ತಿಳಿಸಿದ್ದಾರೆ. ಬಂಧನಕ್ಕೊಳಗಾದ ಎಲ್ಲರನ್ನು ನಂತರ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಬಾಲಕಿಗೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿರುವ ಹೋರಾಟಗಾರರು, ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಒಪ್ಪಿಸಬೇಕು ಹಾಗೂ ಆರೋಪಿಯನ್ನು ರಕ್ಷಿಸುತ್ತಿರುವ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.






