Bidar | ಬಾಲಕಿಯ ಮೃತ್ಯು ಪ್ರಕರಣ : ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಓರ್ವನ ಬಂಧನ

ಬೀದರ್ : ಔರಾದ(ಬಿ) ಪಟ್ಟಣದಲ್ಲಿ ಅಪ್ರಾಪ್ತ ಬಾಲಕಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಮೇ 8ರಂದು ಬಾಲಕಿಯ ತಾಯಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು. ತನಿಖೆಯ ವೇಳೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಅಗತ್ಯವಿರುವ ಎಲ್ಲಾ ಪುರಾವೆಗಳನ್ನು ಕಲೆಹಾಕುವ ಕಾರ್ಯ ಮುಂದುವರಿದಿದೆ. ಇಲಾಖೆಯ ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು, ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಇಲಾಖೆ ಭರವಸೆ ನೀಡಿದೆ.
ಅಪ್ರಾಪ್ತ ಬಾಲಕಿಯ ಪ್ರಕರಣವಾಗಿರುವುದರಿಂದ ಯಾವುದೇ ರೀತಿಯ ಊಹಾಪೋಹ, ವದಂತಿ ಅಥವಾ ಅಸತ್ಯ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಬಾರದು ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ತನಿಖೆಗೆ ಸಹಕಾರಿಯಾಗುವ ಯಾವುದೇ ಸಾಕ್ಷ್ಯಾಧಾರಗಳು ಇದ್ದಲ್ಲಿ ನೇರವಾಗಿ ಪೊಲೀಸ್ ಇಲಾಖೆಯ ಗಮನಕ್ಕೆ ತರಬಹುದು ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳು ಅಥವಾ ಸಾರ್ವಜನಿಕ ವೇದಿಕೆಗಳಲ್ಲಿ ವದಂತಿ ಹರಡಿ ತನಿಖೆಯ ದಿಕ್ಕು ತಪ್ಪಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಎಚ್ಚರಿಕೆ ನೀಡಿದ್ದಾರೆ.






