ಬೀದರ್| ಬಾಲಕಿಯ ಹತ್ಯೆ ಪ್ರಕರಣ : ಸಿಐಡಿ ತನಿಖೆಗೆ ಆದೇಶ

ಬೀದರ್ : ಜಿಲ್ಲೆಯ ಕಮಲನಗರ್ ತಾಲೂಕಿನ ಬಾಲಕಿಯೊಬ್ಬಳನ್ನು ಹತ್ಯೆ ಮಾಡಲಾಗಿದೆ ಎನ್ನುವ ಪ್ರಕರಣವನ್ನು ಇದೀಗ ಸಿಐಡಿ ತನಿಖೆಗೆ ಒಪ್ಪಿಸಿ ಆದೇಶ ಹೊರಡಿಸಲಾಗಿದೆ.
ಔರಾದ್ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ 352, 351, (2), 108 ಅಡಿಯಲ್ಲಿ ದಾಖಲಾಗಿರುವ ಅಪರಾಧ ಸಂಖ್ಯೆ 53/2026 ರ ಪ್ರಕರಣವನ್ನು ತಕ್ಷಣವೇ ಜಾರಿಗೆ ಬರುವಂತೆ ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವರ್ಗಾಯಿಸಲಾಗಿದೆ. ಈ ಕುರಿತು ಪೊಲೀಸ್ ಮಹಾನಿರ್ದೇಶಕ ಡಾ. ಎಂ. ಎ. ಸಲೀಂ ಅವರು ಆದೇಶ ಹೊರಡಿಸಿದ್ದಾರೆ.
ಈ ಪ್ರಕರಣದ ತನಿಖೆಯನ್ನು ಸಿಐಡಿ ಗೆ ಒಪ್ಪಿಸಿರುವ ಕಾರಣ, ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಪ್ರಕರಣಕ್ಕೆ ಸಂಬಂಧಿಸಿದಂತ ತನಿಖಾ ಕಡತಗಳನ್ನು ಸಂಬಂಧಪಟ್ಟ ತನಿಖಾಧಿಕಾರಿ ಅವರ ಮೂಲಕ ಖುದ್ದಾಗಿ ಸಿಐಡಿ ತನಿಖಾಧಿಕಾರಿಗೆ ಹಸ್ತಾಂತರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬೆಂಗಳೂರಿನ ಸಿಐಡಿ ವಿಶೇಷ ಘಟಕ ಮತ್ತು ಆರ್ಥಿಕ ಅಪರಾಧಗಳ ವಿಭಾಗದವರು ಈ ಪ್ರಕರಣದ ಹೆಚ್ಚಿನ ತನಿಖೆ ಕೈಗೊಳ್ಳಬೇಕು. ಪ್ರಕರಣ ಪೂರ್ಣಗೊಂಡ ನಂತರ ವಿವರವಾದ ವರದಿ ಕಳುಹಿಸಬೇಕು ಎಂದು ಆದೇಶ ಹೊರಡಿಸಲಾಗಿದೆ.




