ಬೀದರ್ | ಮನೆಯ ಬಾಗಿಲು ಮುರಿದು ಚಿನ್ನಾಭರಣ, ನಗದು ಕಳ್ಳತನ : ಪ್ರಕರಣ ದಾಖಲು

ಬೀದರ್ : ಮನೆಯಲ್ಲಿರುವ ಅಡುಗೆ ಕೋಣೆಯ ಹಿಂಬಾಗಿಲು ಮುರಿದು ಸುಮಾರು 9 ಲಕ್ಷ 96 ಸಾವಿರ ರೂ. ಬೆಲೆ ಬಾಳುವ ಚಿನ್ನ ಹಾಗೂ ಬೆಳ್ಳಿ ಆಭರಣ ಮತ್ತು ಸುಮಾರು 8 ಲಕ್ಷ 58 ಸಾವಿರ ರೂ. ನಗದು ಹಣ ಕಳ್ಳತನ ಮಾಡಿದ ಘಟನೆ ಹುಮನಾಬಾದ್ ನಗರದ ಚಿದ್ರಿ ಬೈಪಾಸ್ ನ ಮನೆಯೊಂದರಲ್ಲಿ ನಡೆದಿದ್ದು, ಬುಧವಾರ ಪ್ರಕರಣ ದಾಖಲಾಗಿದೆ.
ಈ ಮನೆಯೂ ಪ್ರಭು ಅವರಿಗೆ ಸೇರಿದೆ. ಪ್ರಭು ಅವರು ತಮ್ಮ ಕುಟುಂಬದೊಂದಿಗೆ ಬೆಂಗಳೂರಲ್ಲಿ ವಾಸವಿದ್ದ ಕಾರಣ, ಅವರ ಸಂಬಂಧಿಯಾದ ದುಬಲಗುಂಡಿ ಗ್ರಾಮದ ನಿವಾಸಿ, ಪಲ್ಲವಿ ಅವರು ದಿನಾಲೂ ಆ ಮನೆಗೆ ಹೋಗಿ ಸ್ವಚ್ಛ ಮಾಡಿ ಬರುತ್ತಿದ್ದರು. ಹಾಗೆಯೇ ಪಲ್ಲವಿ ಅವರು ದುಬಲಗುಂಡಿ ಗ್ರಾಮದಲ್ಲಿ ಮನೆ ಕಟ್ಟುತ್ತಿರುವುದರಿಂದ ತಮ್ಮ ಚಿನ್ನಾಭರಣ ಮತ್ತು ನಗದು ಹಣವನ್ನು ಹುಮನಾಬಾದ್ ನಲ್ಲಿರುವ ತಮ್ಮ ಸಂಬಂಧಿ ಪ್ರಭು ಅವರ ಮನೆಯಲ್ಲಿ ಇಟ್ಟಿದ್ದರು. ಪಲ್ಲವಿ ಅವರ ಈ ಚಿನ್ನಾಭರಣ ಮತ್ತು ನಗದು ಹಣ ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪಲ್ಲವಿ ಅವರು ದೂರು ನೀಡಿದ್ದು, ನಾವು ದುಬಲಗುಂಡಿ ಗ್ರಾಮದಲ್ಲಿ ಮನೆ ಕಟ್ಟುತ್ತಿರುವುದರಿಂದ ಹುಮನಾಬಾದ್ ನಲ್ಲಿರುವ ನಮ್ಮ ನಾದಿನಿಯ ಮನೆಯಲ್ಲಿ 8 ಲಕ್ಷ 58 ಸಾವಿರ ನಗದು ಹಣ, 9 ಲಕ್ಷ 80 ಸಾವಿರ ರೂ. ಬೆಲೆ ಬಾಳುವ 120.25 ಗ್ರಾಂ ತೂಕದ ಚಿನ್ನಾಭರಣ ಮತ್ತು 16 ಸಾವಿರ ರೂ. ಬೆಲೆ ಬಾಳುವ ಬೆಳ್ಳಿ ಆಭರಣ ಇಟ್ಟಿದ್ದೇನೆ. ಈ ಎಲ್ಲ ಆಭರಣ ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಹೋಗಲಾಗಿದೆ ಎಂದು ದೂರಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.







