ಬೀದರ್ | ಚಿನ್ನಾಭರಣ, ನಗದು ಕಳ್ಳತನ : ಪ್ರಕರಣ ದಾಖಲು

ಬೀದರ್ : ಮನೆಯ ಬೀಗ ಮುರಿದು ಸುಮಾರು 80 ಸಾವಿರ ರೂ. ನಗದು ಹಣ ಮತ್ತು ಸುಮಾರು 2 ಲಕ್ಷ 10 ಸಾವಿರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿಕೊಂಡು ಹೋದ ಘಟನೆ ನಗರದ ಹಕ್ ಕಾಲೋನಿಯಲ್ಲಿ ನಡೆದಿದ್ದು, ಗುರುವಾರ ಪ್ರಕರಣ ದಾಖಲಾಗಿದೆ.
ಹಕ್ ಕಾಲೋನಿಯ ನಿವಾಸಿ ಮುಹಮ್ಮದ್ ತಾಜುದ್ದಿನ್ ಅವರು ತಮ್ಮ ಮನೆಯಲ್ಲಿ ಕಳ್ಳತನವಾಗಿದೆ ಎಂದು ಆರೋಪಿಸಿ ದೂರು ನೀಡಿದ್ದು, ಸೆ.10 ರಂದು ನಮ್ಮ ಸಂಬಂಧಿಕರು ಹೊರ ದೇಶಕ್ಕೆ ಹೋಗುತ್ತಿದ್ದರು. ಇದರಿಂದಾಗಿ ಅವರನ್ನು ಕಳುಹಿಸಲು ನಾವು ನಮ್ಮ ಮನೆಗೆ ಬೀಗ ಹಾಕಿ ಹೈದರಾಬಾದ್ ಗೆ ಹೋಗಿದ್ದ ವೇಳೆ ಕಳ್ಳತನವಾಗಿದೆ ಎಂದು ಅವರು ದೂರಿದ್ದಾರೆ.
ಸೆ. 11 ರಂದು ನಾವು ನಮ್ಮ ಮನೆಗೆ ಬಂದು ನೋಡುವಷ್ಟರಲ್ಲಿ ಮನೆ ಬೀಗ ಮುರಿದು, ಮನೆಯಲ್ಲಿದ್ದ 1 ಲಕ್ಷ 20 ಸಾವಿರ ರೂ. ಮೌಲ್ಯದ 20 ಗ್ರಾಂ ನ ಒಂದು ಚಿನ್ನದ ಗಲ್ಸರ್ ಸರ, 60 ಸಾವಿರ ರೂ. ಮೌಲ್ಯದ 10 ಗ್ರಾಂ ನ ಚಿನ್ನದ ಕಿವಿಯೋಲೆ, 30 ಸಾವಿರ ರೂ. ಮೌಲ್ಯದ 5 ಗ್ರಾಂ ನ 3 ಚಿನ್ನದ ಉಂಗುರು ಹಾಗೂ 80 ಸಾವಿರ ನಗದು ಹಣ ಹೀಗೆ ಒಟ್ಟು 2 ಲಕ್ಷ 90 ಸಾವಿರ ರೂ. ಮೌಲ್ಯದ ಚಿನ್ನಾಭಾರಣ ಮತ್ತು ನಗದು ಹಣ ಕಳವಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.







