Bidar | ಸರಕಾರಿ ಜಮೀನು ಅತಿಕ್ರಮಣ, ಮಹಿಳೆಯರ ಮೇಲೆ ದೌರ್ಜನ್ಯ ಆರೋಪ : ವಾಲದೋಡ್ಡಿ ಗ್ರಾಮಸ್ಥರ ಪ್ರತಿಭಟನೆ

ಬೀದರ್ : ತಾಲೂಕಿನ ವಾಲದೋಡ್ಡಿ ಗ್ರಾಮದ ನಿವಾಸಿ ವಿಷ್ಣುವರ್ಧನ್ ವಾಲದೋಡ್ಡಿ ಹಾಗೂ ಅವರ ಕುಟುಂಬಸ್ಥರು ಸ್ಮಶಾನ ಭೂಮಿ ಸೇರಿದಂತೆ ಹಲವು ಸರ್ಕಾರಿ ಜಮೀನುಗಳನ್ನು ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಗ್ರಾಮಸ್ಥರು, ವಿಷ್ಣುವರ್ಧನ್ ವಾಲದೋಡ್ಡಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ, ವಿಷ್ಣುವರ್ಧನ್, ಹರ್ಷವರ್ಧನ್ ಹಾಗೂ ಅವರ ತಂದೆ ಗುರಪ್ಪಾ ಅವರು ವಾಲದೋಡ್ಡಿ ಗ್ರಾಮದ ಸಾರ್ವಜನಿಕ ಸ್ಮಶಾನ ಭೂಮಿ ಹಾಗೂ ಸರ್ವೆ ನಂ. 75ರ ಸರ್ಕಾರಿ ಜಮೀನನ್ನು ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ದಲಿತರಿಗೆ ಸರ್ಕಾರದಿಂದ ನೀಡಲಾಗಿದ್ದ ಸಿ-ಫಾರ್ಮ್ ಜಮೀನು ಮತ್ತು ನಿಜಾಮರ ಕಾಲದಿಂದ ಬಂದಿರುವ ಸುಮೇದ ಬೌದ್ಧ ವಿಹಾರದ ಭೂಮಿಯನ್ನು ಕಬಳಿಸಿ ಅಕ್ರಮ ಲೇಔಟ್ ನಿರ್ಮಿಸಿ ಮಾರಾಟ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮಸ್ಥ ಗಣಪತಿ ಅವರು, “ನಮ್ಮ ಪೂರ್ವಜರ ಹೆಸರಿನಲ್ಲಿರುವ ಸರ್ವೆ ನಂ. 81, 82, 83 ಹಾಗೂ 86, 87ರ ಜಮೀನಿನಲ್ಲಿ ಅನಧಿಕೃತ ಪ್ರವೇಶ ಮಾಡಿ, ಸುಳ್ಳು ದಾಖಲೆ ಸೃಷ್ಟಿಸಿ ಅಕ್ರಮ ಲೇಔಟ್ ನಿರ್ಮಿಸಿ ಮಾರಾಟ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಇನ್ನೊಬ್ಬ ಗ್ರಾಮಸ್ಥ ನಾಮದೇವ್, “ಸರ್ಕಾರದಿಂದ ನೀಡಿರುವ ನಮ್ಮ ಜಮೀನಿನಲ್ಲಿ ಉಳುಮೆ ಮಾಡಲು ಬಿಡುತ್ತಿಲ್ಲ. ಜೀವ ಬೆದರಿಕೆ ಹಾಕುತ್ತಿದ್ದಾರೆ” ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಗ್ರಾಮಸ್ಥ ಕಾಶೀನಾಥ್ ಅವರು, “ನನ್ನ ತಂಗಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿರುವ ಕಾರಣ ಆಕೆ ಪತಿಯ ಮನೆಯಿಂದ ಹೊರಬಂದಿದ್ದಾಳೆ” ಎಂದು ಆರೋಪಿಸಿದ್ದಾರೆ.
ವಿಷ್ಣುವರ್ಧನ್ ವಾಲದೋಡ್ಡಿ ಹಾಗೂ ಕುಟುಂಬಸ್ಥರು ದೌರ್ಜನ್ಯ, ಭೂಕಬಳಿಕೆ, ನಕಲಿ ದಾಖಲೆ ಸೃಷ್ಟಿ, ಮಹಿಳೆಯರ ಮೇಲಿನ ಕಿರುಕುಳ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮಹಿಳಾ ಪೊಲೀಸ್ ಠಾಣೆ, ನಗರ ಪೊಲೀಸ್ ಠಾಣೆ, ಮಾರ್ಕೆಟ್ ಪೊಲೀಸ್ ಠಾಣೆ ಹಾಗೂ ಸೈಬರ್ ಪೊಲೀಸ್ ಠಾಣೆಗಳಲ್ಲಿ ಹಲವು ದೂರುಗಳು ದಾಖಲಾಗಿದ್ದರೂ ಕ್ರಮವಾಗಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ವಾಲದೊಡ್ಡಿ ಗ್ರಾಮಸ್ಥರಾದ ಕಾಶಿನಾಥ್, ನಾಮದೇವ್, ಪ್ರವೀಣಕುಮಾರ್, ಗಣಪತಿ, ಲಕ್ಷ್ಮೀ, ರುಕ್ಮಿಣಿ, ಗಂಗಮ್ಮಾ, ದ್ರೋಪದಿ, ಸುಜಾತಾ ಹಾಗೂ ಶರಣಮ್ಮಾ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.






