ಬೀದರ್ | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ

ಬೀದರ್ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಇಂದು ನಗರದಲ್ಲಿ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿದರು.
ಇಂದು ಅಂಬೇಡ್ಕರ್ ವೃತ್ತದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಅತಿಥಿ ಉಪನ್ಯಾಸಕರು, ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಯು ಜಿ ಸಿ ಹಾಗೂ ನಾನ್ ಯು ಜಿ ಸಿ ಎಂಬ ತಾರತಮ್ಯ ಮಾಡದೆ ಶಾಸನಬದ್ಧ ಸರ್ಕಾರದ ಹಂತದಲ್ಲೇ ಮಾನವೀಯ ದೃಷ್ಠಿಯಿಂದ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಹತ್ತಾರು ವರ್ಷಗಳಿಂದ ನಿರಂತರ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ಅತಿಥಿ ಉಪನ್ಯಾಸಕರನ್ನು ಸೇವಾ ಹಿರಿತನದ ಆಧಾರದ ಮೇಲೆ ಪರಿಗಣಿಸಬೇಕು ಎಂದು ಆಗ್ರಹಿಸಲಾಗಿದೆ.
ರಾಜ್ಯದ ಶೇ.70 ರಷ್ಟು ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಸೇವೆ ಮೇಲೆ ಅವಲಂಬಿತವಾಗಿವೆ. ಕಳೆದ ಒಂದು ತಿಂಗಳಿನಿಂದ ವಿದ್ಯಾರ್ಥಿಗಳಿಗೆ ಸರಿಯಾದ ಪಾಠ ಬೋಧನೆ ನಡೆಯುತ್ತಿಲ್ಲ. ದಶಕಗಳಿಂದ ಪಾಠ ಮಾಡುತ್ತಾ ಬಂದಿರುವ ಅತಿಥಿ ಉಪನ್ಯಾಸಕರ ಬದುಕು ಅತಂತ್ರವಾಗಿದೆ. ಇದರಿಂದಾಗಿ ತಕ್ಷಣವೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷ ಚಂದ್ರಕಾಂತ್ ನಾರಾಯಣಪುರ್, ಅತಿಥಿ ಉಪನ್ಯಾಸಕರಾದ ಲಕ್ಷ್ಮೀ, ಶರಣಪ್ಪ ಬಗದುರೆ, ಬಂಡೆಪ್ಪ ಬಾಲಕುಂದೆ, ಮಲ್ಲಿಕಾರ್ಜುನ್, ಸಚಿನ್, ಜಾವಿರ್, ಮಿಲಿಂದ್, ಕೀರ್ತಿ, ಈಶ್ವರಿ, ವಾಣಿ, ಅಶ್ವಿನಿ, ಅಂಬಿಕಾ, ಗಂಗಾಧರ್, ಶಾಮಸುಂದರ್, ದೇವರಾಜ್, ಲಕ್ಷ್ಮಣ್ ಸಾವಳೆ, ಪ್ರಮೀಳಾ ಹಾಗೂ ಅರ್ಚನಾ ಸೇರಿದಂತೆ ಇತರರು ಇದ್ದರು.







