ಬೀದರ್ | ದ್ವೇಷ ಅಳಿದು ಪ್ರೀತಿ ಬೆಳೆಯಬೇಕಿದೆ : ಡಾ. ಅಬ್ದುಲ್ ಖದೀರ್

ಬೀದರ್ : ಈ ನಾಡಿನಲ್ಲಿ ದ್ವೇಷ ಅಳಿದು ಪ್ರೇಮಭಾವ ಬೆಳೆಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಜಾನಪದ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಪೂರಕವಾಗಿ ಕೆಲಸ ಮಾಡುತ್ತವೆ ಎಂದು ಶಾಹಿನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಹೇಳಿದರು.
ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಸಂಸ್ಕೃತಿ ಮಂತ್ರಾಲಯ ಹೊಸದಿಲ್ಲಿ, ಕರುಣಾಮಯ ಯುವಕ ಸಂಘ ನಾವದಗೇರಿ, ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕರ್ನಾಟಕ ಸಾಹಿತ್ಯ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಡಾ. ಶ್ಯಾಮಪ್ರಸಾದ ಮುಖರ್ಜಿಯವರ 125ನೇ ಜನ್ಮ ಶತಮಾನೋತ್ಸವ ಪ್ರಯುಕ್ತ ಆಯೋಜಿಸಿದ ಸಾಂಸ್ಕೃತಿಕ ಉತ್ಸವ ಸಮಾರಂಭವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಕಾಲದಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗಿ ಶಿಕ್ಷಣವಿಲ್ಲದೆ ಓಡಾಡುತ್ತಿದ್ದಾರೆ. ಹಲವರು ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಯುವಕರಲ್ಲಿ ದ್ವೇಷಭಾವ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಆದರೆ ಭವ್ಯ ಭಾರತದ ಏಳಿಗೆಗೆ ಇದು ಮಾರಕವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಪ್ರೊ. ಮನೋಜ್ ಕುಮಾರ್ ಕುಲಕರ್ಣಿ ಮಾತನಾಡಿ, ಭಾರತೀಯ ಸಮಾಜದ ಅಸ್ಮಿತೆ ಉಳಿಸಬೇಕಾಗಿದೆ. ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿದು ಭಾಷೆ, ಸಂಸ್ಕೃತಿ ಗಡಿ ಸಂರಕ್ಷಣೆ ಮತ್ತು ದೇಶಿಯ ಕಲೆಗಳನ್ನು ಎತ್ತಿ ಹಿಡಿಯುವ ಕಾಲ ಇದಾಗಿದೆ. ಇಂತಹ ವೇದಿಕೆಗಳು ನಮಗೆ ಮಹನೀಯರ ಸಾಧನೆ ಸ್ಮರಿಸಲು ಸಹಕಾರಿಯಾಗಿವೆ. ಯುವಜನತೆ ಬದಲಾದಾಗ ದೇಶದ ಉತ್ತಮ ಭವಿಷ್ಯ ಬರೆಯಬಹುದು. ನಾವೆಲ್ಲರೂ ದಿವ್ಯ ಸಂಸ್ಕೃತಿಯ ಪ್ರತಿಬಿಂಬವಾಗಿ ರಾಷ್ಟ್ರದ ಪುನರುತ್ಥಾನಕ್ಕಾಗಿ ದುಡಿಯಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಪ್ರೊ. ಜಗನ್ನಾಥ ಹೆಬ್ಬಾಳೆ ಮಾತನಾಡಿ, ನಾವೆಲ್ಲರೂ ಭಾರತೀಯರು ಎನ್ನುವ ಭಾವ ಮೂಡಿದಾಗ ಮಾತ್ರ ನಮ್ಮಲ್ಲಿ ಅಡಗಿರುವ ಭೇದಭಾವ ತೊಲಗಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ.ರಾಜಕುಮಾರ್ ಹೆಬ್ಬಾಳೆ, ಆದೀಶ್ ವಾಲಿ, ಸತ್ಯಂ ಪದವಿ ಕಾಲೇಜಿನ ಅಧ್ಯಕ್ಷ ಶಿವಾಜಿ ಭೋಸ್ಲೆ, ಓಂ ಸಿದ್ದಿವಿನಾಯಕ ಪದವಿ ಕಾಲೇಜಿನ ಉಪ ಪ್ರಾಚಾರ್ಯೆ ಶಿಲ್ಪಾ, ನಿಜಲಿಂಗಪ್ಪ ತಗಾರೆ, ಶಂಕ್ರೆಪ್ಪಾ ಹೊನ್ನಾ ಹಾಗೂ ಪಂಚಾಕ್ಷರಿ ಪುಣ್ಯಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







