BIDAR | ಎರಡು ಬೈಕ್ ಗಳ ಮಧ್ಯೆ ಮುಖಾಮುಖಿ ಢಿಕ್ಕಿ: ಮಗು ಸಹಿತ ಮೂವರು ಮೃತ್ಯು

ಬೀದರ್ : ಎರಡು ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಐದು ವರ್ಷದ ಮಗು ಸೇರಿದಂತೆ ಮೂವರು ಮೃತಪಟ್ಟ ಘಟನೆ ಜನವಾಡ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಚಾಂಬೋಳ್ - ಬೆನಕನಹಳ್ಳಿ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಭಾಲ್ಕಿ ತಾಲೂಕಿನ ಜೋಳದಾಪಕಾ ಗ್ರಾಮದ ಮಲ್ಲಿಕಾರ್ಜುನ (35), ಅವರ ಪುತ್ರಿ ಮಹಾಲಕ್ಷ್ಮಿ (5) ಹಾಗೂ ಔರಾದ್ ತಾಲೂಕಿನ ನಿವಾಸಿ ಪವನ್ (28) ಮೃತಪಟ್ಟವರು.
ಮಲ್ಲಿಕಾರ್ಜುನ ಅವರು ತನ್ನ ಪತ್ನಿ, ಅತ್ತೆ ಮತ್ತು ಮಗುವಿನೊಂದಿಗೆ ಬೈಕ್ನಲ್ಲಿ ಬೀದರ್ನಿಂದ ಔರಾದ್ ತಾಲೂಕಿನ ಖಾನಾಪುರ ಗ್ರಾಮದ ಕಡೆ ತೆರಳುತ್ತಿದ್ದರು. ಪವನ್ ಔರಾದ್ ಕಡೆಯಿಂದ ಬೀದರ್ ನತ್ತ ಬೈಕಿನಲ್ಲಿ ಪ್ರಯಾಣ ಮಾಡುತಿದ್ದರು. ಎರಡು ಬೈಕ್ ಗಳ ಮಧ್ಯೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಮಲ್ಲಿಕಾರ್ಜುನ್ ಮತ್ತು ಪವನ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮಗು ಮಹಾಲಕ್ಷ್ಮಿ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ.
ಮಲ್ಲಿಕಾರ್ಜುನ್ ಅವರ ಪತ್ನಿ ಹಾಗೂ ಅತ್ತೆಗೆ ಗಾಯಗಳಾಗಿದ್ದು, ಅವರನ್ನು ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







