ಬೀದರ್ | ಆರೋಗ್ಯದ ಸ್ಥಿತಿಗತಿ ತಿಳಿಯಲು ಆರೋಗ್ಯ ತಪಾಸಣೆ ಅತೀ ಮುಖ್ಯ : ಅರವಿಂದ ಕುಲಕರ್ಣಿ

ಬೀದರ್ : ಪ್ರತಿಯೊಬ್ಬರು ಸಮಯಕ್ಕೆ ಸರಿಯಾಗಿ ತಮ್ಮ ಆರೋಗ್ಯದ ಸ್ಥಿತಿಗತಿಯನ್ನು ತಿಳಿಯಲು ಆರೋಗ್ಯ ತಪಾಸಣೆ ಮಾಡುವುದು ಅತೀ ಮುಖ್ಯವಾಗಿದೆ ಎಂದು ಐಸಿಪಿಸಿ ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿ ಅರವಿಂದ್ ಕುಲಕರ್ಣಿ ಹೇಳಿದರು.
ಇಂದು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಶರಣ ತತ್ವ ಪ್ರಸಾರ ಸಮಿತಿ ಹಾಗೂ ಐಸಿಟಿಸಿ ಬ್ರೀಮ್ಸ್ ಆಸ್ಪತ್ರೆ ಇವುಗಳ ಸಂಯುಕ್ತಾ ಶ್ರಯದಲ್ಲಿ ನೌಬಾದ ನಗರದ ಚೌಳಿ ಕಮಾನ್ ಹತ್ತಿರ ಹಮ್ಮಿಕೊಂಡಿರುವ ಉಚಿತ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಎಲ್ಲರಿಗೂ ಆರೋಗ್ಯ, ಎಲ್ಲೆಡೆಯೂ ಆರೋಗ್ಯ ಎನ್ನುವ ನಿಟ್ಟಿನಲ್ಲಿ ಸರಕಾರವು ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಂಡಿರುವುದರಿಂದ ಸಾರ್ವಜನಿಕರು ಇದರ ಲಾಭವನ್ನು ಪಡೆಯಬೇಕು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಐಸಿಟಿಸಿ ಆಪ್ತ ಸಮಾಲೋಚಕಿ ವಾಣಿ ಅವರು ಮಾತನಾಡಿ, 2030 ರ ಸಮಯದಲ್ಲಿ ಎಚ್ ಐ ವಿ ಮುಕ್ತ ಭಾರತಕ್ಕೆ ನಾವೆಲ್ಲರೂ ಕೈಜೋಡಿಸುವ ಅಗತ್ಯವಿದೆ. ಎಚ್ ಐ ವಿ ಸ್ಥಿತಿಗತಿ ಅರಿಯಲು ಪ್ರತಿಯೊಬ್ಬರು ಎಚ್ ಐ ವಿ ಪರೀಕ್ಷೆ ತಪ್ಪದೇ ಮಾಡಿಸಿಕೊಳ್ಳಬೇಕು. ಎಚ್ ಐ ವಿ ಹರಡುವ ವಿಧಾನದ ಬಗ್ಗೆ ಸರಿಯಾದ ಮಾಹಿತಿ ಇದ್ದಲ್ಲಿ ರೋಗ ಬರದಂತೆ ಮತ್ತು ಇತರರಿಗೆ ಹರಡದಂತೆ ತಡೆಯಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಎಸ್ ಟಿ ಪಿ ಸಂಸ್ಥೆಯ ಆಪ್ತ ಸಮಾಲೋಚಕ ಪ್ರದೀಪ್, ಇಮಾನ್ಯುವೆಲ್ ಹಾಗೂ ವಿನೋದ್ ಸೇರಿದಂತೆ ಇತರ ಸಿಬ್ಬಂದಿ ಪಾಲ್ಗೊಂಡಿದ್ದರು.







