ಬೀದರ್ | ಹೆಜ್ಜೇನು ದಾಳಿ : ವ್ಯಕ್ತಿ ಮೃತ್ಯು

ಬೀದರ್ : ಹೊಲದಲ್ಲಿ ಮಂಗ ಓಡಿಸಲು ಹೋದ ಸಮಯದಲ್ಲಿ ಹೆಜ್ಜೇನು ಕಚ್ಚಿದ್ದರಿಂದ ವ್ಯಕ್ತಿಯೊರ್ವ ಮೃತಪಟ್ಟ ಘಟನೆ ಹುಲಸೂರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಗಡಿಗೌಡಗಾಂವ್ ಗ್ರಾಮದಲ್ಲಿ ನಡೆದಿದೆ.
ಯುವರಾಜ ನಾಗಶಟ್ಟಿ ಬಿರಾದಾರ್ (42) ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆ ಸುಮಾರು 11 ಗಂಟೆಗೆ ಮಂಗಗಳನ್ನು ಓಡಿಸಲು ತಂದೆ ಹಾಗೂ ಸಹೋದರನ ಜೊತೆ ಹೊಲಕ್ಕೆ ಹೋಗಿದ್ದರು. ಹೊಲದಲ್ಲಿದ್ದ ಮಾವಿನ ಮರದಲ್ಲಿದ್ದ ಹೆಜ್ಜೆನು ಓಡಿಸಲು ಮರದ ಕೆಳಗೆ ಬೆಂಕಿ ಹಚ್ಚಿ, ಮರದ ಮೇಲೆ ಕುಳಿತಿದ್ದ ಮಂಗಗಳನ್ನು ಓಡಿಸಲು ನಾಗಶೆಟ್ಟಿ ಮರ ಹತ್ತಿದ್ದನು. ಆ ಸಮಯದಲ್ಲಿ ಒಂದೇ ಸಮನೆ ಈತನ ಮೇಲೆ ಹೆಜ್ಜೆನಿನ ನೋಣಗಳು ದಾಳಿ ನಡೆಸಿವೆ. ಇದರಿಂದಾಗಿ ಮರದ ಮೇಲಿಂದ ಈತ ನೇರವಾಗಿ ಮರದ ಕೆಳಗೆ ಹಚ್ಚಲಾಗಿದ್ದ ಬೆಂಕಿಯಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಈತನನ್ನು ಚಿಕಿತ್ಸೆಗೆಂದು ತಕ್ಷಣ ಬಸವಕಲ್ಯಾಣದ ಸರಕಾರಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಶರಣು ಸಲಗರ್ ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಮೃತ ವ್ಯಕ್ತಿ ಗಡಿಗೌಂಡಗಾಂವ್ ಗ್ರಾಮದ ಪಿಕೆಪಿಎಸ್ ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತಿದ್ದನು. ಹಾಗಾಗಿ ಈತನ ಸಾವಿನಿಂದ ಕುಟುಂಬದ ಆಸರೆ ಕಳಚಿದಂತಾಗಿದೆ. ಈತನ ಬದಲಿಗೆ ಕುಟುಂಬದ ಸದಸ್ಯರೊಬ್ಬರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಬೇಕು ಎಂದು ಕುಟುಂಬಸ್ಥರು ಶಾಸಕರಲ್ಲಿ ಮನವಿ ಮಾಡಿದ್ದಾರೆ.
ಪೊಲೀಸ್ ಅಧಿಕಾರಿಗಳು ಘಟನೆ ಬಗ್ಗೆ ತನಿಖೆ ನಡೆಸಿದ್ದಾರೆ ಎನ್ನುವ ಮಾಹಿತಿ ಇದೆ.







