Bidar | ಸಮಗ್ರ ಕೃಷಿಯೊಂದಿಗೆ ತೋಟಗಾರಿಕೆಯಿಂದ ರೈತರಿಗೆ ಅಧಿಕ ಲಾಭ ಸಾಧ್ಯ: ಡಾ.ಸುರೇಶ್ ಪಾಟೀಲ್

ಬೀದರ್ : ಇತ್ತೀಚಿನ ದಿನಗಳಲ್ಲಿ ತೋಟಗಾರಿಕೆ ವಲಯವು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದ್ದು, ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರಗಳಲ್ಲಿ ಒಂದಾಗಿದೆ. ಸಮಗ್ರ ಕೃಷಿಯೊಂದಿಗೆ ಹಣ್ಣು, ತರಕಾರಿ ಹಾಗೂ ವಾಣಿಜ್ಯ ಬೆಳೆಗಳನ್ನು ಬೆಳೆದು ರೈತರು ಅಧಿಕ ಲಾಭ ಗಳಿಸಬಹುದು ಎಂದು ಡಾ.ಸುರೇಶ್ ಪಾಟೀಲ್ ಹೇಳಿದರು.
ಬೀದರ ಜಿಲ್ಲೆಯ ಚಟ್ನಳ್ಳಿ ಗ್ರಾಮದಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ವತಿಯಿಂದ ಮೇ 24ರವರೆಗೆ 84 ದಿನಗಳ ಕಾಲ ಹಮ್ಮಿಕೊಂಡಿದ್ದ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಶಿಬಿರದ ಸಮಾರೋಪ ಸಮಾರಂಭದಲ್ಲಿ ತೋಟಗಾರಿಕೆ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಗ್ರ ಕೃಷಿಯೊಂದಿಗೆ ತೋಟಗಾರಿಕೆ, ತರಕಾರಿ ಹಾಗೂ ಪುಷ್ಪೋದ್ಯಮ ಬೆಳೆಗಳನ್ನು ಬೆಳೆದು ರೈತರು ಹೆಚ್ಚಿನ ಆದಾಯ ಗಳಿಸಬೇಕು ಎಂದು ಅವರು ಸಲಹೆ ನೀಡಿದರು.
ರೈತರು ಹಾಗೂ ವಿದ್ಯಾರ್ಥಿಗಳು ಪರಸ್ಪರ ಸಂವಹನ ನಡೆಸುವುದರಿಂದ ಪ್ರಾಯೋಗಿಕ ಜ್ಞಾನ ವೃದ್ಧಿಯಾಗುತ್ತದೆ. ಶಿಬಿರದ ಅವಧಿಯಲ್ಲಿ ವಿದ್ಯಾರ್ಥಿಗಳು ಕಲಿತಿರುವ ಕೌಶಲ್ಯಗಳು ಮುಂದಿನ ದಿನಗಳಲ್ಲಿ ಆತ್ಮವಿಶ್ವಾಸ ಹಾಗೂ ವೃತ್ತಿಪರ ಸಾಮರ್ಥ್ಯ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ವೇಳೆ ಮಹಾವಿದ್ಯಾಲಯದ ಡೀನ್ ಡಾ. ಎಸ್. ವಿ. ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳು ಚಟ್ನಳ್ಳಿ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಿಗೆ ಭೇಟಿ ನೀಡಿ ರೈತರ ಬೆಳೆ ಪದ್ಧತಿ, ಉತ್ಪಾದನೆ, ಮಾರುಕಟ್ಟೆ ಹಾಗೂ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ತೋಟಗಾರಿಕೆ ಬೆಳೆಗಳ ಸುಧಾರಿತ ತಂತ್ರಜ್ಞಾನ, ಬೀಜೋಪಚಾರ, ನೈಸರ್ಗಿಕ ಕೃಷಿ, ಬೋರ್ಡಿಕ್ಸ್ ಮಿಶ್ರಣ ತಯಾರಿಕೆ, ಜೈವಿಕ ಗೊಬ್ಬರ, ಜೀವಾಮೃತ ಹಾಗೂ ಪೀಡನಾಶಕಗಳ ಕುರಿತು ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ ಎಂದು ಹೇಳಿದರು.
ರೈತರು ಕಾಲಾನುಸಾರ ಕೃಷಿ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡು, ಮಣ್ಣು ಪರೀಕ್ಷೆ ಆಧರಿಸಿ ಸೂಕ್ತ ತಳಿಗಳ ಬೆಳೆಗಳನ್ನು ಬೆಳೆಯುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕಿ ಡಾ.ಜಾನ್ಹವಿ ಡಿ.ಆರ್., ತೋಟಗಾರಿಕೆ ಶಿಬಿರದ ವರದಿ ವಾಚಿಸಿದರು. ಈ ಸಂದರ್ಭದಲ್ಲಿ ತೋಟಗಾರಿಕೆ ಮಹಾವಿದ್ಯಾಲಯದ ಸಂಯೋಜಕ ಡಾ. ಹರೀಶ್, ಡಾ. ಫಾರೂಕ್, ಡಾ. ರಾಜಕುಮಾರ್ ಎಮ್., ಡಾ. ವಿಜಯ್ ಮಹಾಂತೇಶ್, ಡಾ. ಅಬ್ದುಲ್ ಕರೀಂ ,ಅಂಜನೇಯ, ಅಂಬುಜಾ ಹಾಗೂ ಡಾ. ಅನುರಾಧಾ ಸೇರಿದಂತೆ ಅನೇಕ ಪ್ರಗತಿಪರ ರೈತರು ಉಪಸ್ಥಿತರಿದ್ದರು. ಅಂತಿಮ ವರ್ಷದ ವಿದ್ಯಾರ್ಥಿನಿ ಅಂಬಿಕಾ ನಿರೂಪಿಸಿದರು. ಅಮಿತ್ ವಂದಿಸಿದರು.






